ಚಾಮರಾಜನಗರ: ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳು ಸಂಕಷ್ಟ ಸೂತ್ರ ಹಂಚಿಕೊಳ್ಳಬೇಕೆಂದು ಸಚಿವ ಹೆಚ್.ಸಿ.ಮಹಾದೇವಪ್ಪ ಹೇಳಿದರು. ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮಳೆ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ಎರಡೂ ರಾಜ್ಯದ ರೈತರು ಕಷ್ಟದಲ್ಲಿದ್ದಾರೆ. ಈ ನಡುವೆ ಕೋರ್ಟ್ ತೀರ್ಮಾನಗಳು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ಎಲ್ಲದರ ನಡುವೆ ರೈತರ ಹಿತ ಕಾಪಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಕಷ್ಟ ಸೂತ್ರವನ್ನು ಎರಡೂ ರಾಜ್ಯಗಳು ಹಂಚಿಕೊಳ್ಳಬೇಕು. ಕಾವೇರಿ ವಿಚಾರದಲ್ಲಿ ಪರ ವಿರೋಧಕ್ಕಿಂತ ವಸ್ತು ಸ್ಥಿತಿ ಪರಾಮರ್ಶೆ ಮುಖ್ಯವಾಗಿದೆ. ನಮ್ಮ ರೈತರ ಹಿತ ಕಾಪಾಡಿಕೊಂಡು ಎರಡೂ ರಾಜ್ಯಗಳು ಸಂಕಷ್ಟವನ್ನು ಎದುರಿಸಬೇಕು ಎಂದು ಹೇಳಿದರು.
ಕಾವೇರಿ ಪರ ಬಿಜೆಪಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಕಾಲದಲ್ಲೂ ಕಾವೇರಿಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದೆ ಹೆಚ್ಚು, ಕಾವೇರಿ ವಿಷಯ ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ನಮ್ಮ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿಲ್ಲ, ಹೀಗಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ಗೆ ನಾಮನಿರ್ದೇಶಿತ ಸದಸ್ಯರ ಆಯ್ಕೆ ವಿಚಾರದಲ್ಲಿ ದಲಿತ ಸಚಿವರ ಕಡೆಗಣನೆ ಆರೋಪಕ್ಕೆ ಉತ್ತರಿಸಿ, ಕಾಂಗ್ರೆಸ್ನಲ್ಲಿ ಎಲ್ಲಿಯೂ ದಲಿತರ ಕಡೆಗಣನೆ ಆಗಿಲ್ಲ. ಸುಧಾಮ್ ದಾಸ್ ಸಹ ದಲಿತರು, ನಾವು ಕೆಲವು ಅಭಿಪ್ರಾಯಗಳನ್ನ ಹೈಕಮಾಂಡ್ಗೆ ಹೇಳಿದ್ದೇವೆ ಅಷ್ಟೇ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು. ಇದೇ ವೇಳೆ, ನಮ್ಮ ಸಿದ್ಧಾಂತ ಒಪ್ಪಿ ಯಾರು ಪಕ್ಷಕ್ಕೆ ಬರ್ತಾರೆ ಅವರಿಗೆ ಕಾಂಗ್ರೆಸ್ ಬಾಗಿಲು ತೆರೆದಿದೆ. ಕಾಂಗ್ರೆಸ್ ಎಲ್ಲರ ಪಾರ್ಟಿ, ಸ್ವತಂತ್ರ ತಂದುಕೊಟ್ಟ ಪಾರ್ಟಿ, ನಮ್ಮ ಮೇಲೆ ನಂಬಿಕೆಯಿಟ್ಟು ಬರುವವರಿಗೆ ಸ್ವಾಗತವಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ವರ್ಗದ ಹಣ ದುರ್ಬಳಕೆ ಮಾಡಲ್ಲ: ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ 132ನೇ ಜನ್ಮ ದಿನಾಚರಣೆ, ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ ಜೈ ಭೀಮ್ ಯುವಕರ ಕಲಾ ಸಂಘ ಉದ್ಘಾಟಿಸಿ ಮಾತನಾಡಿದ ಸಚಿವ ಮಹಾದೇವಪ್ಪ ಅವರು, ಎಸ್‍ಇಪಿಟಿಎಸ್‍ಪಿ(ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿಶೇಷ ಅನುದಾನ)ಯ ಒಂದು ನಯಾಪೈಸೆ ಹಣವನ್ನು ಎಸ್ಸಿ, ಎಸ್ಟಿಗಲ್ಲದೇ ಬೇರೆಯವರಿಗೆ ಬಳಕೆ ಮಾಡುವುದಿಲ್ಲ. ಎಸ್‍ಇಪಿಟಿಎಸ್‍ಪಿ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುವ ಮೂಲಕ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಹಣವನ್ನು ಎಸ್ಸಿ, ಎಸ್ಟಿಗೆ ಮಾತ್ರ ನಾವು ಬಳಕೆ ಮಾಡುತ್ತೇವೆ ಎಂದು ತಿಳಿಸಿದರು.
ಮನುವಾದ ಜಾರಿಯಲ್ಲಿರಬೇಕು ಎಂಬ ಮನಸ್ಸುಗಳು ಇಂದಿಗೂ ಸಂವಿಧಾನ ಒಪ್ಪಿಕೊಳ್ಳುತ್ತಿಲ್ಲ. ಆದ್ದರಿಂದ ಸಂವಿಧಾನ ಗಟ್ಟಿಯಾದರೆ ನಾವು ಗಟ್ಟಿಯಾದಂತೆ. ಕೆಲ ಪದಗಳು ಸಂವಿಧಾನದಲ್ಲಿಲ್ಲ ಆದ್ದರಿಂದ ಇದನ್ನು ಬಳಸಬಾರದು. ಇತ್ತೀಚೆಗೆ ಅಂಬೇಡ್ಕರ್ ವಾದ ಬಲವಾಗುತ್ತಿದ್ದು, ಸಂವಿಧಾನ ಹೆಚ್ಚೆಚ್ಚು ಮುಂಚೂಣಿಗೆ ಬರುತ್ತಿದೆ. ಪೌರತ್ವ ಕಾನೂನು ತಿದ್ದುಪಡಿ ಕಾಯ್ದೆ ಬಂದಾಗಿನಿಂದ ಸಂವಿಧಾನ ಇಟ್ಟು ಚರ್ಚೆ ಮಾಡಲು ಪ್ರತಿಯೊಬ್ಬರು ಆರಂಭಿಸಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು.
ಇದನ್ನೂಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧ: ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಲು ಬಿಜೆಪಿ ಕರೆ