ಚಾಮರಾಜನಗರ: ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಅಧ್ಯಕ್ಷ ಎನ್. ಖಲೀಲ್ ಉಲ್ಲಾ ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ ಅವರು ಮೇ 4 ರಂದು ಬೆಂಗಳೂರಿನ ದಕ್ಷಿಣ ವಿಭಾಗದ ಬಿಬಿಎಂಪಿಯ ಕೋವಿಡ್ ವಾರ್ ರೂಮ್ ಡೇಟಾ ಆಪರೇಟರ್ ಮತ್ತು ಟೆಲೆ ಕಾಲರ್ ಸಿಬ್ಬಂದಿ ಕಚೇರಿಗೆ ಭೇಟಿ ನೀಡಿ, ಎದುರು ಕೆಲಸ ನಿರ್ವಹಿಸುತ್ತಿದ್ದ 205 ಸಿಬ್ಬಂದಿ ಪೈಕಿಯಲ್ಲಿದ್ದ 17 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಹೆಸರನ್ನು ಓದಿ ಇವರನ್ನು ನೇಮಿಸಿದವರು ಯಾರು ಎಂದು ಕೇಳಿದ್ದು, ಈ ಹೇಳಿಕೆಯಿಂದ ಎರಡು ಸಮುದಾಯದ ಜನರ ನಡುವೆ ಸೌಹರ್ದತೆ ಹಾಳು ಮಾಡಿ ಗಲಭೆ ಉಂಟುಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸಿರುತ್ತಾರೆ ಎಂದು ಅವರು ದೂರಿದ್ದಾರೆ.
ಪ್ರಸಕ್ತ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಅಶಾಂತಿ, ಗಲಭೆ ಉಂಟು ಮಾಡುವ ಹೇಳಿಕೆ ನೀಡಿರುವ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರಷ್ಟೇ ಪಡೆದಿದ್ದು ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.