ಕೊಳ್ಳೇಗಾಲ(ಚಾಮರಾಜನಗರ): ಅಪ್ರಾಪ್ತೆ ಹಾಗೂ ಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಯುವಕನೋರ್ವ ಚುಡಾಯಿಸಿ ಅವಾಚ್ಯ ಶಬ್ದದಿಂದ ನಿಂದಿಸಿರುವ ಆರೋಪದ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಓರ್ವ ಅಪ್ರಾಪ್ತೆ ಹಾಗೂ ಈಕೆಯ ಸಹೋದರಿ ದೌರ್ಜನ್ಯಕ್ಕೊಳಗಾದವರು. ಅದೇ ಗ್ರಾಮದ ಶ್ರೀಧರ್ ಹಾಗೂ ಈತನ ತಾಯಿ, ದೊಡ್ಡಮ್ಮ, ಅಕ್ಕ ಅಂಜು ದೌರ್ಜನ್ಯವೆಸಗಿ ಹಲ್ಲೆ ಮಾಡಿರುವ ಆರೋಪಿಗಳಾಗಿದ್ದಾರೆ.
ಘಟನೆ ವಿವರ:
ಕಳೆದ ಆರು ತಿಂಗಳಿನಿಂದ ಈ ಇಬ್ಬರು ಹೆಣ್ಣು ಮಕ್ಕಳನ್ನು ಶ್ರೀಧರ್ ಎಂಬಾತ ಚುಡಾಯಿಸುತ್ತಿದ್ದನಂತೆ. ಈ ವಿಚಾರವಾಗಿ ಶ್ರೀಧರ್ಗೆ ಬುದ್ಧಿ ಹೇಳಿದ್ದರು. ಆದರೂ ಕೇಳದೆ ಜ. 24ರಂದು ಮನೆ ಬಳಿ ಬಂದು ಇಬ್ಬರು ಹೆಣ್ಣು ಮಕ್ಕಳಿಗೂ ಹಾಗೂ ಅವರ ತಾಯಿಗೂ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ತಕ್ಷಣ ಆತನಿಗೆ ಮನೆಯವರು ಏಟು ನೀಡಿ ಕಳುಹಿಸಿದ್ದರು.
ನಂತರ ಜ. 25ರಂದು ದೊಡ್ಡಮ್ಮ, ಅಂಜು, ಶ್ರೀಧರ್ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಲ್ಲದೆ, ನನ್ನ ಮತ್ತು ನನ್ನ ಅಕ್ಕನ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.