ಚಾಮರಾಜನಗರ: ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಮತ್ತು ರಸ್ತೆ ಬದಿಯ ಎರಡು ಶ್ರೀಗಂಧದ ಮರಗಳು ಕಳವಾಗಿರುವ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರಿನ ಭೀಮನಗರ ಬಡಾವಣೆಯ ಪ್ರಭು ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನೇ ಎಗರಿಸಿದ್ದಾರೆ. ಕಾರು ಅಂದಾಜು 2.5-3 ಲಕ್ಷ ಬೆಲೆ ಬಾಳಲಿದೆ ಎಂದು ಅಂದಾಜಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಗಳವು: ಹನೂರು ಅಜ್ಜೀಪುರ ರಸ್ತೆಯ ಸರ್ಕಾರಿ ನರ್ಸರಿ ಬಳಿಯ ರಸ್ತೆ ಬದಿಯಲ್ಲಿನ ಎರಡು ಶ್ರೀಗಂಧದ ಮರಗಳನ್ನು ಖದೀಮರು ಕತ್ತರಿಸಿ ಹೊತ್ತೊಯ್ದಿದ್ದಾರೆ. ಎರಡು ಸಾಧಾರಣ ಗಾತ್ರದ ಮರಗಳು ಹಾಗೂ ಇನ್ನೊಂದು ಚಿಕ್ಕ ಮರಗಳನ್ನು ಕತ್ತರಿಸಲು ವಿಫಲ ಯತ್ನ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲೂ ಹಲವಾರು ಶ್ರೀಗಂಧದ ಮರಗಳ ಕಳ್ಳತನವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮರಗಳನ್ನು ಕದ್ದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳ್ಳತನ ಸಂಬಂಧ ಮಲೆಮಹದೇಶ್ವರ ಡಿಎಫ್ಒ ಏಡುಕುಂಡಲು ಈಟಿವಿ ಭಾರತದೊಂದಿಗೆ ಮಾತನಾಡಿ, ಹನೂರು ಆರ್ಎಫ್ಒ ಅವರನ್ನ ಸ್ಥಳಕ್ಕೆ ಕಳುಹಿಸಿದ್ದು ಮಹಜರು ಮಾಡುತ್ತಿದ್ದಾರೆ. ಸಣ್ಣ ಗಾತ್ರದ ಮರಗಳಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಆದರೂ ಕದಿಯುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತದೆ ಎಂದರು.