ಚಾಮರಾಜನಗರ: ಬೈಕ್ಗಳನ್ನು ಕದ್ದು ಮಾರಾಟ ಮಾಡುವ ಖತರ್ನಾಕ್ ಗ್ಯಾಂಗನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬಿದರಹಳ್ಳಿಯ ಎಸ್.ಸತ್ಯರಾಜ್, ಬಂಜಾರಾ ಲೇಔಟಿನ ಇ.ಕಲೈಮಣಿ ಹಾಗೂ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಕುಮಾರ ಸೈಮಂಡ್ಸ್ ಬಂಧಿತ ಬೈಕ್ ಕಳ್ಳರು. ಪುಣಜನೂರು ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುವಾಗ ಅನುಮಾನಾಸ್ಪದವಾಗಿ ವರ್ತಿಸಿದ ಸತ್ಯರಾಜ್ ಮತ್ತು ಕುಮಾರ ಸೈಮಂಡ್ಸ್ನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೈಕ್ ಕದ್ದು ಮಾರಾಟ ಮಾಡುವವರು ಎಂದು ತಿಳಿದುಬಂದಿದೆ. ಕೊನೆಗೆ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ 11 ಬೈಕ್ಗಳನ್ನು ಕದ್ದು ಮುಚ್ಚಿಟ್ಟಿದ್ದು ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ ಆನಂದಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ಸುತ್ತಮುತ್ತಲು ಕದ್ದ ಬೈಕ್ಗಳನ್ನು ಚಾಮರಾಜನಗರ ಮತ್ತು ಗಡಿ ಪ್ರದೇಶದಲ್ಲಿ, ಇಲ್ಲಿ ಕದ್ದ ಬೈಕ್ಗಳನ್ನು ಬೆಂಗಳೂರಿನಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಇಲ್ಲವೇ ಗಿರವಿಗಿಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರಿಂದ ವಶಪಡಿಸಿಕೊಂಡಿರುವ ಬೈಕ್ಗಳ ಅಂದಾಜು ಮೊತ್ತವೇ 5 ಲಕ್ಷ ರೂ.ಗಳಾಗಿದೆ ಎಂದು ಮಾಹಿತಿ ನೀಡಿದರು.
ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ಸಿಪಿಐ ಕೆ.ಎಂ.ಮಂಜು, ಚಾಮರಾಜನಗರ ಪೂರ್ವ ಪಿಎಸ್ಐ ಎಸ್.ಪಿ.ಸುನೀಲ್, ಎಎಸ್ಐ ಸೀಗಯ್ಯ ಮತ್ತು ಸಿಬ್ಬಂದಿ ಅಶೋಕ್, ಚಂದ್ರ, ದೊಡ್ಡವೀರಶೆಟ್ಟಿ, ಮಹಾದೇವಸ್ವಾಮಿ, ಮಂಜುನಾಥ್, ನಿಂಗರಾಜು, ವೆಂಕಟೇಶ್, ಶಂಕರರಾಜು ಹಾಗೂ ಕೋಡಹಳ್ಳಿ ಮಹೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಇವರಿಗೆ ಪ್ರಶಸ್ತಿ ನೀಡಲಾಗುವುದು ಎಸ್ಪಿ ಘೋಷಿಸಿದರು.