ಚಾಮರಾಜನಗರ: ಕಾಂಗ್ರೆಸ್ನವರದ್ದು ಎಲುಬಿಲ್ಲದ ನಾಲಗೆ, ಬಿಜೆಪಿ ವಿರುದ್ಧ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮೇಲ್ಮನೆ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ಮತಯಾಚಿಸಿ ಮಾತನಾಡಿ, ಸಾವಿರಾರು ಕೋಟಿ ರೂ. ದುಡ್ಡಿದೆ ಎಂದು 5ನೇ ಕ್ಲಾಸ್ ಪಾಸ್ ಆದವನನ್ನು ಬೆಂಗಳೂರಲ್ಲಿ ಅಭ್ಯರ್ಥಿಯನ್ನಾಗಿಸಿದ್ದಾರೆ, ಈ ಹಿಂದೆ ಕೈ ಅಭ್ಯರ್ಥಿಗಳು ಗೆದ್ದು ಕಡಿದು ಹಾಕಿದ್ದು ಅಷ್ಟರಲ್ಲೇ ಇದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಅಂಬೇಡ್ಕರ್, ಗಾಂಧಿ ಹೆಸರು ಹೇಳಿಕೊಂಡು ಕಾಂಗ್ರೆಸ್ ತಿರುಗುತ್ತಿದೆ. ಅಂಬೇಡ್ಕರ್ ಅವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡದವರು, ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಇದೇ ಕಾಂಗ್ರೆಸ್ನವರು. ಅಂಬೇಡ್ಕರ್ ಆಶಯದಂತೆ ಸರ್ವರಿಗೂ ಒಳಿತನ್ನೂ ಮಾಡುತ್ತಿರುವವರು ಮೋದಿ ಎಂದರು.
ಅಧಿಕಾರ ಹೋಗಿದೆ ಎಂದು ಯಡಿಯೂರಪ್ಪ ಕಾರ್ಯಕರ್ತರ ಒಡನಾಟ, ಪಕ್ಷದ ಸಂಘಟನೆ ಬಿಟ್ಟಿಲ್ಲ, ಈಗಲೂ ಬೇರೆಲ್ಲಾ ಮುಖಂಡರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ, ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮೋದಿ ಕಾರ್ಯಕ್ರಮಗಳನ್ನು ಬೊಮ್ಮಾಯಿ ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಜೊತೆ ಹೊಂದಾಣಿಕೆ ಗೊತ್ತಿಲ್ಲ: ಜೆಡಿಎಸ್ ಅಭ್ಯರ್ಥಿಗಳಿಲ್ಲದ ಕಡೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ, ಈ ಬಗ್ಗೆ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಬಿಜೆಪಿಗೆ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ : S R ಪಾಟೀಲ್ ಹೇಳಿಕೆಯಲ್ಲೇ ಸಿದ್ದರಾಮಯ್ಯ ಪಟಾಲಂ ಸಂಚು ಅನಾವರಣ - ಬಿಜೆಪಿ ಟ್ವೀಟ್