ಚಾಮರಾಜನಗರ: ನೆಚ್ಚಿನ ನಾಯಕನ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಭಿಮಾನಿಗಳಲ್ಲಿ ವಿವಿಧ ನಂಬಿಕೆ ಗರಿಗೆದರುತ್ತದೆ ಎಂಬುದಕ್ಕೆ ಬಿಎಸ್‌ಪಿ ಅಭಿಮಾನಿಗಳ ಈ 2 ನಂಬಿಕೆಗಳೇ ಸಾಕ್ಷಿ.
ರಾಷ್ಟ್ರೀಯ ಪಕ್ಷಗಳಿಂದ ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಮೊದಲ ಬಾರಿ ಸ್ಪರ್ಧಿಸಿದ್ದಾಗಲೇ ವಿ. ಶ್ರೀನಿವಾಸ್ ಪ್ರಸಾದ್ ಹಾಗೂ ಆರ್. ಧ್ರುವನಾರಾಯಣ್ ವಿಜಯಿಯಾಗಿದ್ದರು. ಅದೇ ರೀತಿ ಬಿಎಸ್‌ಪಿ ಅಭ್ಯರ್ಥಿಯಾಗಿರುವ ಡಾ.ಶಿವಕುಮಾರ್ ಕೂಡ ಜಯಶಾಲಿಯಾಗುತ್ತಾರೆ ಎಂಬ ನಂಬಿಕೆ ಪಕ್ಷದ ಕಾರ್ಯಕರ್ತರದ್ದಾಗಿದೆ.
ಪ್ರಚಾರ ವಾಹನಕ್ಕೆ ಬಳಸಿಕೊಳ್ಳುತ್ತಿರುವ ಆನೆಯು ಗೆಲುವಿನ ಮಾಲೆ ತಂದುಕೊಡಲಿದೆ ಎಂಬ ವಿಶ್ವಾಸ ಕಾರ್ಯಕರ್ತರದ್ದಾಗಿದೆ. ಈ ಹಿಂದೆ, ಕೊಳ್ಳೇಗಾಲ ನಗರಸಭೆಯಲ್ಲಿ ಆನೆ ಸ್ತಬ್ಧಚಿತ್ರವನ್ನು ಬಳಸಿಕೊಂಡ ಮೇಲೆ ಬಿಎಸ್‌ಪಿ ಗೆಲುವಿನ ನಗೆ ಬೀರಿತ್ತು. ವಿಧಾನಸಭೆ ಚುನಾವಣೆಯಲ್ಲೂ ಆನೆ ಸ್ತಬ್ಧಚಿತ್ರವನ್ನು ಬಳಸಿಕೊಂಡ ನಂತರ ಮಹೇಶ್ ಶಾಸಕರಾದರು, ಈ ಬಾರಿ ಎಂಪಿ ಚುನಾವಣೆಯಲ್ಲಿ ಇದನ್ನು ಬಳಸುತ್ತಿದ್ದು ಶಿವಕುಮಾರ್ ಎಂಪಿಯಾಗುತ್ತಾರೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.
ಈ ಕುರಿತು, ಅಭ್ಯರ್ಥಿ ಡಾ. ಶಿವಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಪ್ರಚಾರಕ್ಕೆ ಹೋದೆಡೆ ಮೊದಲ ಬಾರಿ ಸ್ಪರ್ಧಿಸಿದ್ದಾಗಲೇ ಅವರಿಬ್ಬರು ಗೆದ್ದಿದ್ದು, ಈ ಬಾರಿ ನೀವು ಗೆಲ್ಲುತ್ತೀರಿ ಎಂಬ ಮಾತುಗಳಾನ್ನಾಡಿದಾಗ ಗೆಲ್ಲುವ ಹುಮ್ಮಸ್ಸು ಹೆಚ್ಚುತ್ತಿದೆ. ಆನೆ ಸ್ತಬ್ಧಚಿತ್ರವೇ ನಮ್ಮ ಸ್ಟಾರ್ ಕ್ಯಾಂಪೇನರ್ ಎಂದು ಹೇಳಿದರು.
ಒಟ್ಟಿನಲ್ಲಿ ನಂಬಿಕೆಗಳು, ನೆಚ್ಚಿನ ನಾಯಕನ ಮೇಲಿನ ಅಭಿಮಾನ ಎಲ್ಲವೂ ಜನತಂತ್ರ ಹಬ್ಬದ ಭಾಗಗಳಾಗಿದ್ದು ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.