ಚಾಮರಾಜನಗರ: ಲೋಕಸಭಾ ಚುನಾವಣೆಯ ರೋಚಕ ಫಲಿತಾಂಶ ತೆರೆಬಿದ್ದಿದ್ದು ಫಲಿತಾಂಶದ ಬಳಿಕ ರಾಜಕಾರಣದ ಲೆಕ್ಕಚ್ಚಾರದ ಚರ್ಚೆ ಗಡಿಜಿಲ್ಲೆಯಲ್ಲಿ ಜೋರಾಗಿದೆ.
ಬಿಎಸ್ಪಿಯಿಂದ ಈ ಬಾರಿ ಕಣಕ್ಕಿಳಿದಿದ್ದ ಡಾ.ಶಿವಕುಮಾರ್ 13 ಸಾವಿರ ಮತಗಳಿಗಷ್ಟೇ ತೃಪ್ತಿ ಪಟ್ಟುಕೊಂಡಿದ್ದಾರೆ. ವರ್ಷದ ಹಿಂದೆಯಷ್ಟೆ ಆಯ್ಕೆಯಾಗಿರುವ ಶಾಸಕ ಎನ್.ಮಹೇಶ್ ವಿಧಾನಸಭಾ ಚುನಾವಣೆಯಲ್ಲಿ 79 ಸಾವಿರ ಮತಗಳನ್ನು ಪಡೆದಿದ್ದರು. ಈ ಕುರಿತು ಬಿಎಸ್ಪಿ ಮುಖಂಡ ಮಹದೇವನಾಯಕ ಮಾತನಾಡಿ, ಸಚಿವರಾದ ಬಳಿಕ ಕ್ಷೇತ್ರದತ್ತ ಹೆಚ್ಚು ಗಮನ ನೀಡಲು ಸಾಧ್ಯವಾದೇ ಇರುವುದು ಮತ್ತು ಎನ್. ಮಹೇಶ್ ಪಕ್ಷದ ಅಭ್ಯರ್ಥಿಗಳ ಪರ ರಾಜ್ಯ ಪ್ರವಾಸ ಮಾಡಬೇಕಿದ್ದರಿಂದ ಚಾಮರಾಜನಗರ ಜಿಲ್ಲೆಗೆ ಕಡಿಮೆ ಸಮಯ ನೀಡಿದ್ದು ಕಡಿಮೆ ಮತಗಳು ಬರಲು ಕಾರಣವಾಗಿರಬಹುದು. ಇದನ್ನೇ ಪಕ್ಷ ಎಚ್ಚರಿಕೆಯ ಘಂಟೆ ಎಂದು ಅರಿತು ಮುಂದಿನ ದಿನಗಳಲ್ಲಿ ಸರಿಪಡಿಸಲಿದೆ ಎಂದರು
ಇನ್ನು ಈ ಕುರಿತು ಶಾಸಕ ಎನ್.ಮಹೇಶ್ ಪ್ರತಿಕ್ರಿಯಿಸಿ, ರಾಷ್ಟ್ರಾದ್ಯಂತ ಮತ ಧ್ರುವೀಕರಣ ಆಗಿದೆ. ಅದರಂತೆ, ಕ್ಷೇತ್ರದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೆಚ್ಚಿನ ಮತಹಂಚಿಕೆಯಾಗಿದೆ. ಕೊಳ್ಳೇಗಾಲದಲ್ಲಿ ನನ್ನ ನಿರೀಕ್ಷೆ ಹೆಚ್ಚಿತ್ತು ಎಂದು ತಿಳಿಸಿದರು.
ತವರಿನಲ್ಲೇ ಉಪ್ಪಿ ಅಭ್ಯರ್ಥಿಗೆ ಅಲ್ಪ ಮತ:
ರಾಜ್ಯದಲ್ಲಿ ಸ್ಪರ್ಧಿಸಿದ್ದ ಯುಪಿಪಿ ಅಭ್ಯರ್ಥಿಗಳಲ್ಲಿ ಹೆಚ್ಚು ಮತ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿರುವರು ಹನೂರು ನಾಗರಾಜ್ ಅವರು 9510 ಮತಗಳನ್ನು ಪಡೆದಿದ್ದಾರೆ. ವಿಪರ್ಯಾಸವೆಂದರೆ ತವರಿನಲ್ಲೇ ಅತ್ಯಲ್ಪ ಮತ ಬಂದಿದ್ದು 993 ಮತಗಳನ್ನು ಪಡೆಯಲಷ್ಟೆ ಶಕ್ತವಾಗಿದ್ದು, ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ 1000 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1438 ಮತಗಳನ್ನು ಉಪ್ಪಿ ಅಭ್ಯರ್ಥಿ ಬೇಟೆಯಾಡಿರುವುದೇ ಕ್ಷೇತ್ರವಾರು ಹೆಚ್ಚಿನ ಮತವಾಗಿದೆ.