ಚಾಮರಾಜನಗರ: ಬಿ.ಎಸ್ ಯಡಿಯೂರಪ್ಪ ಅವರು ಒಂದಲ್ಲ ಎರಡಲ್ಲ ನಾಲ್ಕು ಬಾರಿ ಮುಖ್ಯಮಂತ್ರಿ ಆದರೂ ಸಹ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಭೇಟಿ ಕೊಡಲಿಲ್ಲ. ಇದೀಗ ಅಧಿಕಾರದಲ್ಲಿರದಿದ್ದರೂ ಸಹ ಅವರು ಚಾಮರಾಜನಗರದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಹೌದು, ವಿಧಾನಪರಿಷತ್ ಚುನಾವಣೆ ಸಂಬಂಧ ಚಾಮರಾಜನಗರದಿಂದ 10-15 ಕಿ.ಮೀ ದೂರದ ಸಂತೇಮರಹಳ್ಳಿಗೆ ನಾಳೆ ಬಿಎಸ್ವೈ ಆಗಮಿಸುತ್ತಿದ್ದು, ಚಾಮರಾಜನಗರಕ್ಕೆ ಮಾತ್ರ ಬರುತ್ತಿಲ್ಲ. ಕೆಲ ತಿಂಗಳುಗಳ ಹಿಂದೆಯಷ್ಟೇ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ಮನೆಗೆ ಭೇಟಿ ನೀಡಿದಾಗಲೂ ಗುಂಡ್ಲುಪೇಟೆಗೆ ನೇರ ಹೆಲಿಕಾಪ್ಟರ್ನಲ್ಲಿ ಬಂದಿದ್ದರು. ಈಗ, ಚಾಮರಾಜನಗರದಿಂದ ತುಸು ದೂರದ ಸಂತೇಮರಹಳ್ಳಿಗೆ ಬಂದು ಜಿಲ್ಲಾ ಕೇಂದ್ರಕ್ಕೆ ಬರದೇ ಹಿಂದಿರುಗಲಿದ್ದಾರೆ.
ಪ್ರತಿಪಕ್ಷಗಳಿಂದ ಟೀಕೆ, ಆಕ್ಷೇಪ: ಮೃತ ಅಭಿಮಾನಿ ಮನೆಗೆ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಭೇಟಿ ಕೊಟ್ಟಿದ್ದನ್ನು ಮಾಜಿ ಸಂಸದ ಆರ್. ಧ್ರುವನಾರಾಯಣ ಸೇರಿದಂತೆ ಹಲವರು ಟೀಕಿಸಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಆಕ್ಸಿಜನ್ ದುರಂತ ನಡೆದು 35 ಮಂದಿ ಮೃತಪಟ್ಟಾಗ ಚಾಮರಾಜನಗರಕ್ಕೆ ಬರಲಿಲ್ಲ, ಅಭಿಮಾನಿ ಮನೆಗೆ ಮಾತ್ರ ಹೋದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಅಧಿಕಾರ ಇಲ್ಲದಿದ್ದಾಗಲೂ ಚಾಮರಾಜನಗರಕ್ಕೆ ಬರದಿರುವುದು ಹಲವರ ಅಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರಾಜಕಾರಣ ಅಂದ್ರೆ ದೇವೇಗೌಡರ ಕುಟುಂಬಕ್ಕೆ ರಾಜ್ಯ ಅನ್ನೋ ರೀತಿ ವರ್ತನೆ: ಸಿದ್ದರಾಮಯ್ಯ ಸಿಡಿಮಿಡಿ
ಇಂದಿಗೂ ಕೂಡ ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಪ್ರಭಾವ ಬೀರಬಲ್ಲ ನಾಯಕ. ಲಿಂಗಾಯುತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬಿಎಸ್ವೈ ಅವರಿಗೆ ಬೇರೆಲ್ಲ ನಾಯಕರಿಗಿಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಗುಂಡ್ಲುಪೇಟೆಯಲ್ಲಿ ಶಾಸಕರಾಗಿ ನಿರಂಜನಕುಮಾರ್ ಆಯ್ಕೆಯಾಗಲು ಬಿಎಸ್ವೈ ಪ್ರಭಾವ ಇತ್ತು. ಕೆಜೆಪಿ ಕಟ್ಟಿದ್ದಾಗಲೂ ಬಲು ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳು ಯಡಿಯೂರಪ್ಪ ಅವರನ್ನು ಹಿಂಬಾಲಿಸಿದ್ದು ಇದಕ್ಕೆ ಸಾಕ್ಷಿ.
ಕೆಲವು ತಿಂಗಳುಗಳ ಹಿಂದೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆಂಬಲಿಗರು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಘೇರಾವ್ ಹಾಕಿ ಯಡಿಯೂರಪ್ಪ ವಿರುದ್ಧ ಮಾತನಾಡದಂತೆ, ಸಮುದಾಯ ಒಡೆಯದಂತೆ ಎಚ್ಚರಿಕೆ ನೀಡಿದ್ದರು.