ಚಾಮರಾಜನಗರ: ಮಹಿಳೆ ಎಂದರೆ ಮನೆಗೆಲಸ ಇಲ್ಲವೇ ಕಚೇರಿ ಕೆಲಸಕ್ಕಷ್ಟೇ ಸರಿ, ಹೆಚ್ಚು ಶಕ್ತಿವಂತರಲ್ಲ ಎಂಬ ಪುರುಷ ಸಮಾಜದ ಮೂದಲಿಕೆಗಳಿಗೆಲ್ಲ ಸೆಡ್ಡು ಹೊಡೆದು ನಿಂತ ಗಟ್ಟಿಗಿತ್ತಿ. ಕಳೆದ 10 ವರ್ಷದಿಂದ ಓರ್ವ ಮಹಿಳೆ ಕಾಡು ಕಾಯುವ ಕಾಯಕದಲ್ಲಿ ತೊಡಗಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿಧಾಮ ಪಿ.ಜಿ.ಪಾಲ್ಯ ವಲಯದಲ್ಲಿ ಫಾರೆಸ್ಟ್ ವಾಚರ್ ಅಂದರೆ ಅರಣ್ಯ ವೀಕ್ಷಕಿಯಾಗಿ ನಾಗಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಅಗ್ನಿ ಅವಘಡದ ವೇಳೆ ಬೆಂಕಿ ನಂದಿಸುವ ಕಾರ್ಯದಲ್ಲಿಯೂ ಭಾಗಿಯಾಗಿದ್ದಾರಂತೆ.
25 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ವಾಚರ್ ಆಗಿರುವ ನಾಗಮ್ಮ, ಡಿಎಫ್ಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆ, ಬೇಟೆಗಾರರ ಮನೆ ಮೇಲೆ ದಾಳಿ, ಗಸ್ತು ತಿರುಗುವ ಕೆಲಸವಷ್ಟೇ ಅಲ್ಲದೇ ಬೆಂಕಿ ಬಿದ್ದಾಗ ನಂದಿಸುವ ಕಾರ್ಯಾಚರಣೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ನಾಗಮ್ಮ ಎಂಬ ಫಾರೆಸ್ಟ್ ವಾಚರ್, ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆದಿವಾಸಿ ಮಹಿಳೆ ಸೇರಿದಂತೆ ಮೂವರು ವಾಚರ್ಗಳು, ಎಸ್ಟಿಪಿಎಫ್ ಬಂಡಿಪುರ ವಿಭಾಗದಲ್ಲಿ ಒಬ್ಬ ಮಹಿಳಾ ಫಾರೆಸ್ಟ್ ವಾಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅರಣ್ಯ ರಕ್ಷಣೆಯಲ್ಲಿ ಈ ಪಂಚನಾರಿಯರು ಪವರ್ಫುಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ. ಅಲ್ಲದೇ ಸಮಾಜದಲ್ಲಿ ಕಷ್ಟವೆಂದು ಕುಗ್ಗುವ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.