ಚಾಮರಾಜನಗರ : ಕೊರೊನಾ 2ನೇ ಅಲೆಯ ಸಂಕಷ್ಟದ ಸಮಯದಲ್ಲಿ ವಿಪಕ್ಷಗಳು ಬೀದಿಯಲ್ಲಿ ಗಲಾಟೆ ಮಾಡಿದರೆ ನಾವು ಮೌನ ಕ್ರಾಂತಿಯನ್ನೇ ಮಾಡಿದೆವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ವಿಹೆಚ್ಪಿ ಕಾಲೇಜಿನ ಸಭಾಂಗಣದಲ್ಲಿ ಕೊರೊನಾ ಮೃತರ ಅಂತ್ಯಸಂಸ್ಕಾರ ನೆರವೇರಿಸಿದ 52 ಮಂದಿ ಬಿಜೆಪಿ ಕಾರ್ಯಕರ್ತರಿಗೆ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ವಿಪಕ್ಷಗಳು ತಮ್ಮ ಕರ್ತವ್ಯ ಮರೆತು ಬೀದಿಯಲ್ಲಿ ಗಲಾಟೆ ಮಾಡಿದವು. ವೆಂಟಿಲೇಟರ್ ಇಲ್ಲವೆಂದು ಮಾಧ್ಯಮಗಳ ಮುಂದೆ ಹೇಳಿದರು.
ಶವ ಸಂಸ್ಕಾರ ಮಾಡಲು ಯಾರೂ ಇಲ್ಲವೆಂದು ಗಲಾಟೆ ಮಾಡಿದರು. ಆ ಪಕ್ಷಗಳ ಕಾರ್ಯಕರ್ತರು ಶವ ಸಂಸ್ಕಾರ ಮಾಡಲಿಲ್ಲ. ಆದರೆ, ನಾವು ಶವಸಂಸ್ಕಾರ ಮಾಡಿದೆವು. ವೆಂಟಿಲೇಟರ್ ಸೌಲಭ್ಯ ಒದಗಿಸಿದೆವು, ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳುವ ಮೂಲಕ ಮೌನ ಕ್ರಾಂತಿ ಮಾಡಿದೆವು ಎಂದರು.
ಚಾಮರಾಜನಗರ ಬಿಜೆಪಿಯ 52 ಮಂದಿ ಕಾರ್ಯಕರ್ತರು ನಕ್ಷತ್ರಗಳಾಗಿದ್ದಾರೆ. ಭಯಮುಕ್ತ ಸಮಾಜ ಮಾಡಲು ಭಯಬಿಟ್ಟು ಕೆಲಸ ಮಾಡಿದ್ದಾರೆ. ಕಠಿಣ ಸಮಸ್ಯೆಗಳನ್ನು ಎದುರಿಸಿ ಕೊರೊನಾ ಮೃತರ ಅಂತ್ಯಸಂಸ್ಕಾರ ನಡೆಸಿ ರಾಜ್ಯದಲ್ಲೇ ಅತಿಹೆಚ್ಚು ಶವಸಂಸ್ಕಾರ ಮಾಡಿರುವುದು ಚಾಮರಾಜನಗರ ಜಿಲ್ಲೆಯಾಗಿದೆ. ಬಿಜೆಪಿ ಕಾರ್ಯಕರ್ತರು ಸೈನಿಕರಂತೆ ಕೆಲಸ ನಿರ್ವಹಿಸಿದರು. ಭಗವಂತನ ಸೇವೆ ರೀತಿ ಮಾಡಿರುವಿರಿ ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ, ಬಿಜೆಪಿ ಕೊರೊನಾ ವಾರಿಯರ್ಸ್‌ಗಳಿಗೆ ಶಾಲು, ಹಾರ, ಫಲಗಳನ್ನು ಕೊಟ್ಟು ಪುಷ್ಪಾರ್ಚನೆ ಮಾಡಲಾಯಿತು