ಚಾಮರಾಜನಗರ: ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗಲಿದೆ ಎಂಬ ಮೌಢ್ಯವನ್ನು ಬದಿಗೊತ್ತಿ ಮೂರನೇ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುತ್ತಿದ್ದಾರೆ.
ಹೌದು.. ಸಮಾಜವಾದಿ ರಾಜಕಾರಣಿ ಸಿದ್ದರಾಮಯ್ಯ ಅವರಿಂದ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿದರೂ ಸಹ ತದನಂತರ ಬಂದ ಬಿ.ಎಸ್. ಯಡಿಯೂರಪ್ಪ ಗಡಿಜಿಲ್ಲೆಗೆ ಕಾಲಿಡಲೇ ಇಲ್ಲ. ಆದರೆ ಬೊಮ್ಮಾಯಿ ಈಗ 3ನೇ ಬಾರಿಗೆ ಗಡಿಜಿಲ್ಲೆಗೆ ಆಗಮಿಸುತ್ತಿದ್ದು, ನೂರಾರು ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಂದು ಮೌಢ್ಯ ಪ್ರಾರಂಭವಾಗುವ ಹೊತ್ತಿನಲ್ಲಿ ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಭೇಟಿ ಕೊಟ್ಟಿದ್ದರೆ, ಮೌಢ್ಯ ಮಾಯವಾಗಿರುವ ಈ ಕಾಲದಲ್ಲಿ ಮಗ ಸಿಎಂ ಬಸವರಾಜ ಆಗಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.
1988ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿ ಕೊಟ್ಟು ತಾಲೂಕು ಕಚೇರಿ ಸಂಕೀರ್ಣ ಮತ್ತು ತಾಲೂಕು ಆಸ್ಪತ್ರೆ ಉದ್ಘಾಟಿಸಿದ್ದರು. ಅದರಂತೆ, ಈಗ ಎಸ್.ಆರ್. ಬೊಮ್ಮಾಯಿ ಅವರ ಪುತ್ರ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.
ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಅಪವಾದ ಆರಂಭವಾಗಿದ್ದು ದೇವರಾಜ ಅರಸು ಅವರ ಕಾಲದಿಂದ. ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಅಧಿಕಾರ ಕಳೆದುಕೊಂಡಿರುವ ಕೆಲ ಉದಾಹರಣೆಗಳಾಗಿವೆ.
ಈ ಹಿಂದೆ ಅಧಿಕಾರ ಕಳೆದುಕೊಂಡವರು: ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ವಿಶಿಷ್ಟ ಸಾಲಿನಲ್ಲಿ ನಿಲ್ಲುವ ದೇವರಾಜ ಅರಸು, ಐದು ವರ್ಷದ ಮೊದಲ ಅವಧಿ ಮುಗಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. 1977ರ ಡಿಸೆಂಬರ್ 31 ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಅರಸು 1980ರ ಜನವರಿ 7ರಂದು ಅಧಿಕಾರ ಕಳೆದುಕೊಂಡರು. ಇದಕ್ಕೂ ಮುನ್ನ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.
ಅರಸು ರಾಜೀನಾಮೆ ನಂತರ ಮುಖ್ಯಂಮತ್ರಿಯಾಗಿ ಆರ್. ಗುಂಡೂರಾವ್ ಪ್ರಮಾಣ ವಚನ ಸ್ವೀಕಾರ ಮಾಡಿದರು. 1980ರ ಜನವರಿ 12 ರಿಂದ 1983ರ ಜನವರಿ 6 ರವರೆಗೆ ಆಡಳಿತ ನಡೆಸಿದರಾದರೂ, ಮರು ಆಯ್ಕೆ ಆಗಲಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದ್ದನ್ನು ಇಲ್ಲಿಯೂ ಸ್ಮರಿಸಬಹುದಾಗಿದೆ. ನಂತರ ರಾಮಕೃಷ್ಣ ಹೆಗಡೆ ಮೊದಲ ಕಾಂಗ್ರೆಸೇತರ ಮುಖ್ಯಂಮತ್ರಿಯಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರು.
1983ರ ಜನವರಿ 10 ರಿಂದ 1984ರ ಡಿಸೆಂಬರ್ 29, 1985ರ ಮಾರ್ಚ್ 8 ರಿಂದ 1986ರ ಫೆಬ್ರವರಿ 13 ಮತ್ತು 1986ರ ಫೆಬ್ರವರಿ 16 ರಿಂದ 1988ರ ಆಗಸ್ಟ್ 10ರವರೆಗೆ ಒಟ್ಟು ಮೂರು ಬಾರಿ ಮುಖ್ಯಮಂತ್ರಿಯಾದರೂ, ಒಮ್ಮೆಯೂ ಪೂರ್ಣ ಅವಧಿ ಮುಗಿಸಲಿಲ್ಲ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಆರೋಪದಿಂದ ಅವರು ರಾಜೀನಾಮೆ ನೀಡಬೇಕಾಯಿತು. ರಾಜೀನಾಮೆಗೂ ಮುನ್ನ ಅವರೂ ಕೂಡ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು.
ರಾಮಕೃಷ್ಣ ಹೆಗಡೆ ರಾಜೀನಾಮೆ ನಂತರ ಮುಖ್ಯಮಂತ್ರಿಯಾದ ಎಸ್.ಆರ್. ಬೊಮ್ಮಾಯಿ 1988ರ ಆಗಸ್ಟ್ 13 ರಿಂದ 1989ರ ಏಪ್ರಿಲ್ 21ರವರೆಗೆ ಮಾತ್ರ ಆಡಳಿತ ನಡೆಸಿದರು. ರಾಜ್ಯದಲ್ಲಿ ಬೊಮ್ಮಾಯಿ ರಾಜೀನಾಮೆ ನಂತರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು. ಬೊಮ್ಮಾಯಿ ಕೂಡ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದ್ದು, 1989ರ ನವೆಂಬರ್ 30 ರಂದು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, 1990ರ ಅಕ್ಟೋಬರ್ 10 ರಂದು ಅವರು ಅಧಿಕಾರ ಕಳೆದುಕೊಂಡರು. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ವೀರೇಂದ್ರ ಪಾಟೀಲ್ ಕೂಡ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಇದು ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೌಢ್ಯ ಬೆಳೆಯಲು ಪೂರಕವಾಯಿತು.
ಇದೆಲ್ಲಾ ಹೊರತಾಗಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಅವರಾದ ಬಳಿಕ, ಬೊಮ್ಮಾಯಿ ಮೂರನೇ ಬಾರಿ ಭೇಟಿ ಕೊಡುತ್ತಿದ್ದಾರೆ.
ಎಲ್ಲೆಲ್ಲಿ ಕಾರ್ಯಕ್ರಮ: ಮೈಸೂರಿನಿಂದ ರಸ್ತೆಯ ಮೂಲಕ ಆಗಮಿಸುವ ಸಿಎಂ ಬೆಳಗ್ಗೆ 11.15ಕ್ಕೆ ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಮಧ್ಯಾಹ್ನ 2.30ಕ್ಕೆ ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣಕ್ಕೆ ಆಗಮಿಸಿ ಹನೂರು ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4.30 ಗಂಟೆಗೆ ಮೈಸೂರಿಗೆ ತೆರಳಲಿದ್ದು, ಮಳೆ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟದ ಭೇಟಿ ಕಾರ್ಯಕ್ರಮ ರದ್ದಾಗಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ನವ ನಗರವಾಗಿ ಕಲಬುರಗಿ ನಿರ್ಮಾಣ ಆಗಲಿದೆ: ಸಿ ಎಂ ಬೊಮ್ಮಾಯಿ
ಬಿಎಸ್ವೈ ಫೋಟೋ ಇಲ್ಲದ್ದಕ್ಕೆ ಅಭಿಮಾನಿಗಳ ಆಕ್ರೋಶ: ಸಾವಿರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಇಂದು ಉದ್ಘಾಟನೆ, ಶಂಕುಸ್ಥಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.
ವೇದಿಕೆಯಲ್ಲಿ ಅಳವಾಡಿಸಿದ್ದ ಎಲ್ಸಿಡಿ ಪರದೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪೋಟೋ ಇಲ್ಲದ್ದಕ್ಕೆ ಕುಪಿತಗೊಂಡ ಅಭಿಮಾನಿಗಳು, ಯಡಿಯೂರಪ್ಪಗೆ ಜೈಕಾರ ಹಾಕಿ ಫೋಟೋ ಹಾಕುವಂತೆ ಒತ್ತಾಯಿಸಿದರು. ಕೆಲಹೊತ್ತು ಇದು ಗೊಂದಲಕ್ಕೂ ಕಾರಣವಾಯಿತು.
ಬಳಿಕ, ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ವೇದಿಕೆ ಏರಿ 'ಇದು ಸರ್ಕಾರದ ಕಾರ್ಯಕ್ರಮವಾದ್ದರಿಂದ ಯಡಿಯೂರಪ್ಪ ಅವರ ಫೋಟೋ ಹಾಕಲಾಗಲ್ಲ. ಅವರ ಬಗ್ಗೆ ಅಪಾರ ಗೌರವ-ಪ್ರೀತಿ ಇದೆ. ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಎಂದು ಮನವಿ ಮಾಡಿಕೊಂಡರು. ಇದಾದ ನಂತರ ಬಿಎಸ್ವೈ ಅಭಿಮಾನಿಗಳು ಶಾಂತವಾದರು.