ಚಾಮರಾಜನಗರ: ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸರ್ಕಾರಿ ನೌಕರರೊಬ್ಬರ ಹುಟ್ಟುಹಬ್ಬದ ಆಚರಣೆ ಮಾಡಲಾಗಿದ್ದು, ಸಾಮಾಜಿಕ ಅಂತರ ಮರೆತು ಜನ್ಮದಿನ ಆಚರಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಈ ಸಂಭ್ರಮ ನಡೆದಿದೆ ಎನ್ನಲಾಗಿದೆ. ಅಲ್ಲಿನ ನೌಕರನಾದ ಪಿ.ನಂಜುಂಡಸ್ವಾಮಿ ಎಂಬುವವರ ಜನ್ಮದಿನವನ್ನು ಕಚೇರಿಯಲ್ಲೇ ಆಚರಿಸಲಾಗಿದೆ ಎನ್ನಲಾಗಿದೆ. ಆದರೆ, ಈ ವೇಳೆ ಸರ್ಕಾರಿ ನೌಕರರು ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಇಲ್ಲದೇ ಆಚರಣೆ ಮಾಡಿರುವುದು ಸರಿಯೇ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲಾಡಳಿತ ಭವನದಲ್ಲಿ ಸಾಲು ಸಾಲು ಸಭೆಗಳನ್ನು ನಡೆಸಿದ್ದರು. ಅವರ ಭೇಟಿ ದಿನವೇ ಈ ಆಚರಣೆ ನಡೆದಿರುವುದು ಮತ್ತೊಂದು ವಿಪರ್ಯಾಸ. ಕೊರೊನಾ ಸಂದರ್ಭದಲ್ಲಿ ಈ ರೀತಿ ಸಂಭ್ರಮಾಚರಣೆ ಮಾಡಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.