ಕೊಳ್ಳೇಗಾಲ (ಚಾಮರಾಜನಗರ): ಪ್ಲಾಸ್ಟಿಕ್ ಆಯ್ದು, ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.
ಮೃತನನ್ನು ಪಳನಿ(35) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಅಲೆಮಾರಿಯಾಗಿದ್ದು ಮನೆ, ಸಂಸಾರವೇನೂ ಇರಲಿಲ್ಲ ಎನ್ನಲಾಗಿದೆ. ಈತನ ಜೊತೆಗಿದ್ದವರು ಇಲ್ಲವೇ ಈತನ ಪರಿಚಯಸ್ಥರು ಗಲಾಟೆ ಮಾಡಿಕೊಂಡು ಕೊಲೆ ಮಾಡಿ ಬಿಸಾಡಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನೂ ಮೃತನ ಸೋದರ ಅತ್ತೆ ಕುಪ್ಪಮ್ಮ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ತಪಿತಸ್ಥರ ಪತ್ತೆಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಡಿವೈಎಸ್ಪಿ ನಾಗರಾಜು ತಂಡ ಸ್ಥಳಕ್ಕೆ ತೆರಳಿ ಭೇಟಿ ನೀಡಿದ್ದರು. ಸಿಪಿಐ ಶಿವರಾಜ್ ಆರ್.ಮುಧೋಳ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪಿಎಸ್ಐ ಚೇತನ್ ಪ್ರಕರಣದ ಬೆನ್ನಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ: ತನಿಖೆ ಸಂಬಂಧ ಶವ ಪತ್ತೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರಕರಣದ ತನಿಖೆಯನ್ನು ಕೈಗೊಳ್ಳುವ ಸಂಬಂಧ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಬಳಿ ಕಾರು ಪಲ್ಟಿ.. ದಾಂಡೇಲಿಗೆ ಹೊರಟಿದ್ದ ಇಬ್ಬರು ಸಾವು, ನಾಲ್ವರಿಗೆ ಗಾಯ
ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮೃತನ ಶವವನ್ನು ಶವಾಗಾರದಲ್ಲಿಡಲಾಗಿದೆ. ಮೈಸೂರಿನಲ್ಲಿರುವ ಈತನ ಸಂಬಂಧಿಕರಿಗೆ ಸಾವಿನ ಮಾಹಿತಿ ಕೊಟ್ಟಿದ್ದು, ಅವರಿಗೆ ಮೃತದೇಹ ಹಸ್ತಾಂತರವಾಗಲಿದೆ.