ಚಾಮರಾಜನಗರ: 15 ವರ್ಷಗಳ ಹಿಂದೆ ರೈತರೊಬ್ಬರು ಬ್ಯಾಂಕಿನಲ್ಲಿ 14 ಲಕ್ಷ ರೂ ಸಾಲ ಪಡೆದಿದ್ದು ಈಗ ಅದು ಬರೋಬ್ಬರಿ 95 ಲಕ್ಷಕ್ಕೇರಿ ಬ್ಯಾಂಕ್ ನೋಟಿಸ್ ಬಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ನಡೆದಿದೆ.
ಕೊಡಸೋಗೆ ಗ್ರಾಮದ ಮಹದೇವಸ್ವಾಮಿ ಹಾಗೂ ಅವರ ಇಬ್ಬರು ಮಕ್ಕಳಿಗೂ ಚಾಮರಾಜನಗರ ಶಾಖೆಯ ಕೆನರಾ ಬ್ಯಾಂಕ್ 95 ಲಕ್ಷ ರೂ. ಪಾವತಿಸಬೇಕೆಂದು ನೋಟಿಸ್ ಕೊಟ್ಟಿದ್ದು, ಇಡೀ ಆಸ್ತಿ ಮಾರಿದರೂ ಅಷ್ಟು ಹಣ ಹೊಂದಿಸಲಾಗಲ್ಲ ಎಂದು ರೈತ ಕುಟುಂಬ ಅಳಲು ತೋಡಿಕೊಂಡಿದೆ.

2005-06 ರಲ್ಲಿ ಕೃಷಿ ಚಟುವಟಿಕೆಗಾಗಿ ಎರಡು ಕಂತಿನಲ್ಲಿ 14 ಲಕ್ಷ ರೂ. ಸಾಲ ಪಡೆದಿದ್ದ ಮಹದೇವಸ್ವಾಮಿ 3-4 ಬೋರ್ ವೆಲ್ ಕೊರೆಸಿದರೂ ನೀರು ಬರದೇ ಕೈ ಸುಟ್ಟುಕೊಂಡು ಸಾಲ ತೀರಿಸಿರಲಿಲ್ಲ. ಈಗ ಬ್ಯಾಂಕ್ 95 ಲಕ್ಷ ಪಾವತಿಸಿ ಎಂದು ಮಹಾದೇವಸ್ವಾಮಿ ಅವರಿಗಷ್ಟೇ ಅಲ್ಲದೇ ಅವರ ಇಬ್ಬರು ಮಕ್ಕಳಿಗೂ ನೋಟಿಸ್ ಕೊಟ್ಟಿರುವುದು ಇಡೀ ಕುಟುಂಬವನ್ನೇ ಕಂಗಾಲಾಗಿಸಿದೆ.
ಎಸ್ಬಿಐ ಮಾದರಿ ಅನುಸರಿಸಲಿ:
ಸಾಲ ಪಾವತಿಸದ ರೈತರಿಂದ ಶೇ.10-15 ರಷ್ಟು ಬಡ್ಡಿ ಪಡೆದು ಹಣ ಕಟ್ಟಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಅವಕಾಶ ಮಾಡಿಕೊಟ್ಟರೇ ಆಸ್ತಿ ಮಾರಾಟ ಮಾಡಿ ಹಣ ಹಿಂತಿರುಗಿಸುತ್ತೇನೆ. ಆದರೆ, ಹತ್ತಿರಹತ್ತಿರ ಒಂದು ಕೋಟಿ ರೂ. ಕೊಡಿ ಎಂದರೆ ನಾವೆಲ್ಲಿ ಹೋಗಬೇಕೆಂದು ರೈತ ಮಹಾದೇವಸ್ವಾಮಿ ಅಳಲು ತೋಡಿಕೊಂಡಿದ್ದಾರೆ.