ಚಾಮರಾಜನಗರ: ವೇತನ ಪರಿಷ್ಕರಣೆ, ಸಮಾನ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ, ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ ನಡೆಯುತ್ತಿದೆ. ಇದಕ್ಕೆ ಬೆಂಬಲವಾಗಿ ಜಿಲ್ಲೆಯಲ್ಲಿಯೂ ಬ್ಯಾಂಕ್ ನೌಕರರು ಶಾಖಾ ಕಚೇರಿಗಳ ಬಾಗಿಲು ಮುಚ್ಚಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರ ಒಕ್ಕೂಟವನ್ನು ಬೆಂಬಲಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಸಿಂಡಿಕೇಟ್, ಕೆನರಾ, ಎಸ್ಬಿಐ, ಕಾರ್ಪೋರೇಷನ್ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ಗಳ ನೌಕರರು ಶಾಖಾ ಕಚೇರಿಯ ಬಾಗಿಲು ಮುಚ್ಚಿ, ಹಣಕಾಸು ವಹಿವಾಟು ಸ್ಥಗಿತಗೊಳಿಸಿದರು.
ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ನಡೆಯಲಿರುವ ಬ್ಯಾಂಕ್ ನೌಕರರ ಮುಷ್ಕರದಿಂದಾಗಿ, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತಮ್ಮ ದಿನನಿತ್ಯದ ವಹಿವಾಟಿಗೆ ಕಡಿವಾಣ ಹಾಕಿಕೊಂಡಂತಾಗಿದೆ. ವಾರದ ಹಿಂದೆಯೇ ಎರಡು ದಿನಗಳ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆಂದು ತಿಳಿದಿದ್ದರಿಂದ, ಬ್ಯಾಂಕ್ಗಳ ಮುಂದೆ ಯಾವುದೇ ಜನ ಜಂಗುಳಿ ಕಂಡು ಬರಲಿಲ್ಲ.
ಇನ್ನೂ ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ, ಹಣ ಹಿಂಪಡೆಯಲು ಯಾವುದೇ ತೊಂದರೆಯಾಗಿಲ್ಲ. ನಾಳೆಯೂ ಮುಷ್ಕರ ನಡೆಯಲಿದ್ದು, ನಾಡಿದ್ದು ಭಾನುವಾರ ಇರುವುದರಿಂದ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದೆ. ಹಣದ ವಹಿವಾಟಿನ ತುರ್ತು ಕಾರ್ಯಗಳಿಗೆ ಸ್ವಲ್ಪ ಅಡಚಣೆಯಾಗಲಿದೆ.