ಚಾಮರಾಜನಗರ: ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯನ್ನು ಕಾಡಲ್ಲಷ್ಟೇ ಅಲ್ಲದೇ, ಅಂಚೆ ಕಾರ್ಡ್ನಲ್ಲೂ ನೋಡಬಹುದು.

ಹೌದು, ಬಂಡೀಪುರ ಅಂಚೆ ಕಚೇರಿ ಬಳಸುವ ಠಸ್ಸೆಯಲ್ಲಿ ಹುಲಿಯೇ ಕೇಂದ್ರ ಬಿಂದುವಾಗಿದ್ದು, ಐತಿಹಾಸಿಕ ಪ್ರದೇಶಗಳು, ವಿಶೇಷ ಸ್ಥಳಗಳಿಗೆ ಕೊಡ ಮಾಡುವ ಅಂಚೆ ಮುದ್ರೆಯೂ ಬಂಡೀಪುರದಲ್ಲಿ 80ರ ದಶಕದಿಂದ ಜಾರಿಯಲ್ಲಿದೆ.

ಭಾರತೀಯ ಅಂಚೆ ಇಲಾಖೆಯು ವಿಶೇಷ ಸ್ಥಳಗಳಿಗೆ ವಿಶೇಷ ಮುದ್ರೆಗಳನ್ನು ನೀಡಿದ್ದು, ಬಂಡೀಪುರಲ್ಲಿ ಹುಲಿಯೇ ಕೇಂದ್ರ ಬಿಂದುವಾದ್ದರಿಂದ ಬಂಡೀಪುರ ಅಂಚೆ ಕಚೇರಿಯಲ್ಲಿ ಹುಲಿ ಠಸ್ಸೆಯನ್ನು ಬಳಸಲಾಗುತ್ತಿದೆ. 1982-1992ರ ವರೆಗೆ ಘರ್ಜಿಸುತ್ತಿರುವ ಹುಲಿ ಮುಖವನ್ನು ಮುದ್ರೆಯಾಗಿ ಬಳಸಲಾಗಿತ್ತು. 1992-2018ರ ವರೆಗೆ ಹುಲಿ ಹೆಜ್ಜೆಗುರುತು ಮುದ್ರೆಯಾಗಿತ್ತು. 2019ರಿಂದ ಮತ್ತೆ ಹುಲಿ ಮುಖವನ್ನು ಮುದ್ರೆಯನ್ನಾಗಿ ಬಳಸಲಾಗುತ್ತಿದೆ.

ಪಿಕ್ಟೋರಿಯಲ್ ಕ್ಯಾನ್ಸಲೇಶನ್( ವಿಶೇಷ ಅಂಚೆಮುದ್ರೆ) ಬೇಡಿಕೆ ಇದೆ. ಪೋಸ್ಟ್ ಕಾರ್ಡ್ಗಳಿಗೆ ಹುಲಿ ಹೆಜ್ಜೆಗುರುತುಗಳ ಮುದ್ರೆ ಹಾಕಿಸಿಕೊಳ್ಳಲು ಪ್ರವಾಸಿಗರು, ಸ್ಥಳೀಯರು, ವಿದ್ಯಾರ್ಥಿಗಳು ಈ ಅಂಚೆ ಕಚೇರಿಗೆ ಆಗಾಗ್ಗೆ ಬರುತ್ತಲೇ ಇರುತ್ತಾರೆ ಎಂದು ಅಂಚೆ ಕಚೇರಿ ಸಿಬ್ಬಂದಿ ಮಹೇಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಹುಲಿಗಳಿಗೆ ಹೆಸರುವಾಸಿಯಾದ ಬಂಡೀಪುರದಲ್ಲಿ ಕಾಡಿನಲ್ಲಷ್ಟೇ ಅಲ್ಲದೇ ಕಾರ್ಡಿನಲ್ಲಿ, ಅಂಚೆ ಪತ್ರಗಳಲ್ಲಿ, ದಾಖಲೆಗಳಲ್ಲಿ ಹುಲಿ ನೋಡುವುದು ವಿಶೇಷವಾಗಿದೆ.
ಇದನ್ನೂ ಓದಿ: ಅಪಹರಣಕ್ಕೊಳಗಾಗಿದ್ದ ಕೇರಳ ವ್ಯಕ್ತಿಯನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು: ವಿಡಿಯೋ