ಚಾಮರಾಜನಗರ: ಡ್ರಗ್ ಮಾಫಿಯಾ ನಿನ್ನೆ ಮೊನ್ನೆಯದಲ್ಲ. ಅದು ಹಲವಾರು ದಶಕಗಳಿಂದ ರಾಜ್ಯದಲ್ಲಿದೆ. ಆದರೆ ಯಾವ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಅವರು ಹರವೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಡ್ರಗ್ ಪಿಡುಗನ್ನು ಗಂಭೀರವಾಗಿ ಪರಿಗಣಿಸಿ, ಡ್ರಗ್ ಮಾಫಿಯಾ ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟಿದೆ. ಈ ಡ್ರಗ್ ಮಾಫಿಯಾವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಎಸ್ವೈ, ಉಳಿದ ಅವಧಿಗೂ ಮುಖ್ಯ ಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಇದೇ ವೇಳೆ ತಿಳಿಸಿದರು.
ಟೆಂಪಲ್ ರನ್: ಕಾರ್ಯಕರ್ತರ ಸಭೆಗೂ ಮುನ್ನ ವಿಜಯೇಂದ್ರ ಕೆರೆಹಳ್ಳಿ, ಹರವೆ, ಚಾಮರಾಜನಗರದ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಾಗೂ ಇತ್ತೀಚೆಗೆ ಕೊರೊನಾಗೆ ಬಲಿಯಾದ ಮಾಜಿ ಶಾಸಕ ಗುರುಸ್ವಾಮಿ ಅವರ ಮನೆಗೂ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.