ಚಾಮರಾಜನಗರ: ವಿಚಾರಣೆಗೆ ಕರೆದು ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕ ಮನ ಬಂದಂತೆ ಥಳಿಸಿರುವ ಆರೋಪ ನಗರದಲ್ಲಿ ಕೇಳಿ ಬಂದಿದೆ.
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್ ಹಾಗೂ ಅರಣ್ಯ ರಕ್ಷಕ ಮಂಜುನಾಥ್ ವಿರುದ್ಧ ಉಮೇಶ್ ಹಾಗೂ ಗಿರೀಶ್ ಎಂಬವರು ಪಟ್ಟಣ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ತಾಲೂಕಿನ ಹೊಂಗಲವಾಡಿ ಗ್ರಾಮದ ಉಮೇಶ್ ಹಾಗೂ ಗಿರೀಶ್ ಎಂಬವರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಕಳೆದ, ಸೋಮವಾರ ಇವರಿಬ್ಬರಿಗೂ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ ಹಿನ್ನೆಲೆ, ಎಸಿಎಫ್ ಕಚೇರಿಗೆ ತೆರಳಿದ್ದರು. ಈ ವೇಳೆ, ಉದ್ದೇಶಪೂರ್ವಕವಾಗಿ ಇಬ್ಬರಿಗೂ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿದೂರು: ಉಮೇಶ್ ಹಾಗೂ ಗಿರೀಶ್ ವಿರುದ್ಧ ಆರ್ಎಫ್ಒ ಶಾಂತಪ್ಪ ಪೂಜಾರ್ ಪಟ್ಟಣ ಠಾಣೆಗೆ ಪ್ರತಿದೂರು ನೀಡಿದ್ದು, ಸಮವಸ್ತ್ರ ಹಿಡಿದು ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿದ್ದಾರೆ.