ಚಾಮರಾಜನಗರ: ಬೆಳಗ್ಗೆ 10 ಗಂಟೆಯಾದರೂ ನಿದ್ರೆಯಿಂದ ಏಳದ ಜನಪ್ರತಿನಿಧಿ ನಮಗೆ ಬೇಕೆ ಎಂದು ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ, ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.
ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಜನರ ಕಷ್ಟ-ಸುಖಗಳಿಗೆ ಸಮಯದ ಅರಿವಿಲ್ಲದೇ ಸಂಸದ ಧ್ರುವನಾರಾಯಣ ಸ್ಪಂದಿಸುತ್ತಿದ್ದಾರೆ. ಆದರೆ, ಹತ್ತಾದರೂ ಏಳದ ಶ್ರೀನಿವಾಸಪ್ರಸಾದ್ ಅವರಿಂದ ಕ್ಷೇತ್ರದ ಅಭಿವೃದ್ಧಿ, ಜನರಿಗೆ ಸ್ಪಂದನೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರಸಾದ್ ಅವರು ಉಪಕಾರ ಸ್ಮರಣೆಯಿಲ್ಲದ ರಾಜಕಾರಣಿ. ಕೇಂದ್ರ ಸಚಿವರಾಗಲು ಕಾರಣರಾದ ಜೆ.ಹೆಚ್.ಪಟೇಲರನ್ನು ಸ್ಮರಿಸಲಿಲ್ಲ. ಸಂಯುಕ್ತ ಜನತಾ ದಳದಿಂದ ಗೆದ್ದು ಸಚಿವ ಪದವಿ ಉಳಿಸಿಕೊಳ್ಳಲು ಸಮತಾಗೆ ಹೋಗಿದ್ದರು. ಸಮಾಜವಾದಿ ಪಕ್ಷದ ಜಾರ್ಜ್ ನಿಧನರಾದಾಗಲು ಶ್ರೀನಿವಾಸ ಪ್ರಸಾದ್ ಹೋಗಲಿಲ್ಲ ಎಂದರು.
ಜೆಡಿಯುನಿಂದ ಲೋಕಸಭೆಗೆ ಅವರು ಸ್ಪರ್ಧಿಸಿದ್ದ ವೇಳೆ ನಾನು, ಹೆಚ್.ಎಸ್.ಮಹಾದೇವ ಪ್ರಸಾದ್, ಸಿ.ಗುರುಸ್ವಾಮಿ ೬೬ ಸಾವಿರ ಹೆಚ್ಚುವರಿ ಮತ ಕೊಡಿಸಿದೆವು ಎಂದು ಇದೇ ವೇಳೆ ಕೃಷ್ಣಮೂರ್ತಿ ತಿಳಿಸಿದರು.