ಚಾಮರಾಜನಗರ: ಬಾಲ್ಯ ವಿವಾಹ ನಿಲ್ಲಿಸಿದ ಕೋಪಕ್ಕೆ ಕಟ್ಟಡ ಮಾಲೀಕನೋರ್ವ ಅಂಗನವಾಡಿ ಕೇಂದ್ರವನ್ನೇ ಸ್ಥಳಾಂತರ ಮಾಡಿಸಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಕುಮಾರ್ ಎಂಬ ಕಟ್ಟಡ ಮಾಲೀಕ ತನಗೆ ಮನೆ ಅವಶ್ಯಕತೆ ಇದೆ ಎಂದು ಸಬೂಬು ಕೊಟ್ಟು ಅಂಗನವಾಡಿ ಕೇಂದ್ರವನ್ನು ಖಾಲಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಸಮಯಾವಕಾಶವೂ ನೀಡದಿದ್ದರಿಂದ ಪಾತ್ರೆ-ಪಗಡಗಳು, ಸಿಲಿಂಡರ್, ಬೋರ್ಡ್‌ಗಳನ್ನು ಬೀದಿಗಿಟ್ಟು ಅಂಗನವಾಡಿ ಕಾರ್ಯಕರ್ತೆ ದಿಕ್ಕು ತೋಚದೇ ಪರಿತಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಕುಮಾರ್ ತಮ್ಮ ಮಗಳಿಗೆ ಬಾಲ್ಯ ವಿವಾಹ ಮಾಡಿಸುತ್ತಿದ್ದರು. ಈ ಕಾನೂನು ಬಾಹಿರವಾದ ಮದುವೆಯನ್ನು ತಡೆದಿದ್ದರಿಂದ ರೊಚ್ಚಿಗೆದ್ದಿರುವ ಆತ ತಮಗೀಗ ಮನೆಯ ಅವಶ್ಯಕತೆ ಇದೆ. ಹೀಗಾಗಿ ಕೂಡಲೇ ಅಂಗನವಾಡಿಯನ್ನು ಖಾಲಿಮಾಡುವಂತೆ ಸಮಯವನ್ನೂ ನೀಡದೆ ಒತ್ತಡ ಹೇರಿ ಖಾಲಿ ಮಾಡಿಸಿದ್ದಾರೆ ಎಂದು ಸಿಡಿಪಿಒ ತಿಳಿಸಿದ್ದಾರೆ.
ಇದನ್ನೂ ಓದಿ : 17 ವರ್ಷದ ಕನಸು ನನಸು: ಆಂಜನೇಯನ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ
ಸ್ವಂತ ಕಟ್ಟಡದ ಕಾಮಗಾರಿ ನಡೆಯುತ್ತಿರುವುದರಿಂದ ಎರಡು ವರ್ಷಗಳಿಂದ ಅಂಗನವಾಡಿ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಈಗ ಕಾಮಗಾರಿ ಪೂರ್ಣವಾಗುವ ತನಕ ಅಂಗನವಾಡಿ ಕೇಂದ್ರ ಇಲ್ಲವಾಗಿದೆ.