ಚಾಮರಾಜನಗರ: ಕರ್ನಾಟಕದಿಂದ ತಮಿಳುನಾಡಿಗೆ ತೆಂಗಿನಕಾಯಿ ಮಟ್ಟೆಗಳ ಜೊತೆಗೆ ಮದ್ಯವನ್ನು ಬಾಕ್ಸ್ಗಟ್ಟಲೇ ಸಾಗಾಣೆ ಮಾಡುತ್ತಿದ್ದನ್ನು ತಮಿಳುನಾಡು ಪೊಲೀಸರು ಪತ್ತೆ ಹಚ್ಚಿದ್ದಾರೆ.
ತೆಂಗಿನ ನಾರು ಕಾರ್ಖಾನೆಗಳಿಗೆ ತೆಂಗಿನಕಾಯಿ ಮಟ್ಟೆಯನ್ನು ರಾಜ್ಯದ ಹಲವು ಜಿಲ್ಲೆಗಳಿಂದ ಸಂಗ್ರಹಿಸಿ ನೂರಾರು ಲಾರಿಗಳು ತಮಿಳುನಾಡಿಗೆ ಸಾಗಿಸುತ್ತವೆ. ತಮಿಳುನಾಡಿನಲ್ಲಿ ಕಠಿಣ ಲಾಕ್ಡೌನ್ ವಿಧಿಸಿ ಮದ್ಯದಂಗಡಿಗಳನ್ನು ಮುಚ್ಚಿರುವುದರಿಂದ ತೆಂಗಿನಮಟ್ಟೆ ಜೊತೆ ರಾಜ್ಯದ ಮದ್ಯದ ಬಾಟೆಲ್ಗಳನ್ನು ಇಬ್ಬರು ಲಾರಿ ಚಾಲಕರು ಸಾಗಿಸುತ್ತಿದ್ದುದನ್ನು ಆಸನೂರು ಚೆಕ್ ಪೋಸ್ಟ್ನಲ್ಲಿ ಪೊಲೀಸರು ಪತ್ತೆಹಚ್ಚಿದ್ದರಿಂದ ಮಟ್ಟೆ ಸಾಗಿಸುವ ಲಾರಿಗಳನ್ನು ಸಂಪೂರ್ಣ ಪರಿಶೀಲಿಸಿದ ನಂತರವೇ ಗಡಿಯೊಳಕ್ಕೆ ಬಿಟ್ಟುಕೊಳ್ಳುತ್ತಿದ್ದಾರೆ.
ಲಾರಿಗಳು ಸಂಪೂರ್ಣ ಪರಿಶೀಲನೆಗೆ ಸಾಕಷ್ಟು ಸಮಯ ಹಿಡಿಯುವುದರಿಂದ 50ಕ್ಕೂ ಹೆಚ್ಚು ಲಾರಿಗಳು ಸಾಲುಗಟ್ಟಿ ಗಡಿಯಲ್ಲಿ ನಿಂತಿದ್ದು ಊಟವೂ ಇಲ್ಲದೇ ಇತ್ತ ಲಾರಿಯೂ ಹೋಗದ ಸ್ಥಿತಿ ಏರ್ಪಟ್ಟಿದೆ. ಕೆಲವರು ಮಾಡಿದ ತಪ್ಪಿಗೆ ಈಗ ನೂರಾರು ಮಂದಿ ಸುಮ್ಮನೆ ಗಡಿಯಲ್ಲಿ ಸಿಲುಕಿಕೊಂಡಂತಾಗಿದೆ.