ಚಾಮರಾಜನಗರ: 13 ವರ್ಷ ವಯಸ್ಸಿನ ಬಾಲಕನ ಸಾಕ್ಷ್ಯವನ್ನು ಪರಿಗಣಿಸಿದ ನ್ಯಾಯಾಲಯ ಅಪರಾಧಿಯಾಗಿರುವ ಆತನ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮದ್ಯದ ನಶೆಯಲ್ಲಿ ಪತ್ನಿ ಕೊಂದಿದ್ದ ಪತಿಗೆ ಇಲ್ಲಿನ ಜಿಲ್ಲಾ ನ್ಯಾಯಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದ ಮಂಜು ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ಇವರ 13 ವರ್ಷದ ಮಗ ಈ ಪ್ರಕರಣದ ಪ್ರಮುಖ ಸಾಕ್ಷಿ. "ತನ್ನ ತಾಯಿಯನ್ನು ಹೇಗೆ ಕೊಂದನು, ಯಾವ ರೀತಿ ಗಲಾಟೆ ನಡೆಯುತ್ತಿತ್ತು" ಎಂಬುದನ್ನು ಸವಿವರವಾಗಿ ಮಗ ತಿಳಿಸಿದ್ದನ್ನು ಪರಿಗಣಿಸಿದ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ಹೆಚ್ಚುವರಿ ನ್ಯಾ. ಎನ್.ಆರ್. ಲೋಕಪ್ಪ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಏನಿದು ಪ್ರಕರಣ:
ಈಗ್ಗೆ 18 ವರ್ಷಗಳ ಹಿಂದೆ ಉತ್ತುವಳ್ಳಿ ಗ್ರಾಮದ ಚಿನ್ನತಾಯಮ್ಮ ಎಂಬಾಕೆಯನ್ನು ಮಂಜು ವಿವಾಹವಾಗಿದ್ದ. ಆದರೆ, 5-6 ವರ್ಷಗಳಿಂದ ಈಚೆಗೆ ಮದ್ಯಪಾನಕ್ಕೆ ದಾಸನಾಗಿ ನಿತ್ಯ ಪತ್ನಿಯೊಟ್ಟಿಗೆ ಜಗಳ ಮಾಡುವುದನ್ನು ರೂಢಿಸಿಕೊಂಡಿದ್ದನು. ಅದೇ ರೀತಿ, 2017 ರ ಅಕ್ಟೋಬರ್ 26 ಮಧ್ಯರಾತ್ರಿ ದಂಪತಿ ಜಗಳ ತಾರಕಕ್ಕೇರಿತ್ತು. ಆ ವೇಳೆ, ಮಂಜು ಪತ್ನಿ ಚಿನ್ನತಾಯಮ್ಮಳಿಗೆ ಮರದ ಪಟ್ಟಿಯಿಂದ ತಲೆಗೆ ಹೊಡೆದು, ಜುಟ್ಟು ಹಿಡಿದು ಗೋಡೆಗೆ ಗುದ್ದಿಸಿ ಕೊಲೆ ಮಾಡಿದ್ದ.
ಅಂದು ರಾತ್ರಿ ತನ್ನ ಅಪ್ಪ - ಅಮ್ಮನ ನಡುವೆ ನಡೆದ ಗಲಾಟೆಯನ್ನು ಸಂಪೂರ್ಣ ಕಂಡಿದ್ದ ಮಗ ಕೊಲೆ ಮಾಡಿದ್ದು ಹೇಗೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿ, ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದ್ದಾನೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ವಕೀಲೆ ಉಷಾ ವಾದ ಮಂಡಿಸಿದ್ದರು.