ಚಾಮರಾಜನಗರ : ಪತಿಯಿಂದ ದೂರವಾಗಿದ್ದ ಯುವತಿಗೆ ಬಾಳು ಕೊಡುತ್ತೇನೆಂದು ನಂಬಿಸಿ ಯುವಕನೋರ್ವ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಆಕೆಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದ ರಾಜು ಎಂಬಾತ ವಂಚಿಸಿ ಪರಾರಿಯಾದ ಯುವಕ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ರಮ್ಯಾ (ಹೆಸರು ಬದಲಿಸಲಾಗಿದೆ) ಎಂಬಾಕೆ ಚಾಮರಾಜನಗರ ಮಹಿಳಾ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ, ದೂರು ಕೊಟ್ಟು 10-15 ದಿನಗಳಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಲವ್ ಕಹಾನಿ? : ಸುಷ್ಮಾ ಅವರು ಪತಿಯನ್ನು ತೊರೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನೌಕರಿ ಹಿಡಿದು ನೆಲೆಸಿದ್ದರು. ಆ ವೇಳೆ ರಾಜುವಿನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಒಂದೂವರೆ ವರ್ಷ ಲೀವಿಂಗ್ ಟುಗೆದರ್ ಜೀವನ ನಡೆಸಿದ್ದಾರೆ.
ಎರಡು ಬಾರಿ ಗರ್ಭಪಾತವೂ ಆಗಿದೆಯಂತೆ. ಎಷ್ಟು ದಿನ ಈ ಜೀವನ?. ಮದುವೆಯಾಗು ಎಂದು ಯುವತಿ ಪಟ್ಟು ಹಿಡಿದಾಗ ಚಿನ್ನಾಭರಣ, 5-6 ಲಕ್ಷ ರೂ. ಹಣದೊಟ್ಟಿಗೆ ರಾಜು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈಗ ತನಗೆ ರಾಜುವಿನೊಂದಿಗೆ ಮದುವೆ ಮಾಡಿಸಿ ಎಂದು ಯುವತಿ ಪಟ್ಟು ಹಿಡಿದಿದ್ದಾರೆ.
ಸದ್ಯ, ಯುವಕನ ಗ್ರಾಮಸ್ಥರು ಕೂಡ ಯುವತಿ ಪರ ನಿಂತು ನ್ಯಾಯ ದೊರಕಿಸಿ ಕೊಡಲು ಮುಂದಾಗಿದ್ದಾರೆ. ಆದರೆ, ದೂರು ಕೊಟ್ಟು 12 ದಿನಗಳಾದರೂ ಮಹಿಳಾ ಠಾಣೆ ಪೊಲೀಸರು ಮಾತ್ರ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಓದಿ: ಬೆಂಗಳೂರು: ಪ್ಲಾಸ್ಟಿಕ್ ಚೀಲದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ