ಚಾಮರಾಜನಗರ: ಉಂಡು ಹೋದ ಕೊಂಡು ಹೋದ ಎಂಬಂತೆ ಯುವಕನೊಬ್ಬ ಪಾನಿಪೂರಿ ತಿಂದಿದ್ದೂ ಅಲ್ಲದೇ ವ್ಯಾಪಾರಿ ಖಾತೆಗೆ ಕನ್ನ ಹಾಕಿದ್ದ ಯುವಕ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಬೆಂಗಳೂರು ಮೂಲದ ವಿಶಾಲ್ (19) ಬಂಧಿತ ಯುವಕ. ಸ್ನೇಹಿತರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಈತ ತನ್ನ ಬುದ್ಧಿವಂತಿಕೆ ತೋರಿ ವಂಚಿಸಿ ಕೊನೆಗೆ ಜೈಲುಪಾಲಾಗಿದ್ದಾನೆ. ಅಪರಿಚಿತರಿಗೆ ಫೋನ್ ಕೊಡುವ ಮುನ್ನ ಹಾಗೂ ಅವರಿವರ ಮುಂದೆ ಪಾಸ್ ವರ್ಡ್ ಒತ್ತುವ ಮುನ್ನ ಎಚ್ಚರಿಕೆ ಎಷ್ಟು ಅವಶ್ಯ ಎಂಬುದಕ್ಕೆ ಈ ಸ್ಟೋರಿ ಓದಿ.
ಫೋನ್ ಪೇ ತೆರೆಯುವಾಗ ಪಾಸ್ ವರ್ಡ್ ನೋಡಿಕೊಂಡಿರುವ ಖದೀಮ: ಗೆಳೆಯರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಆರೋಪಿ ಯುವಕ ಕೊಳ್ಳೇಗಾಲದ ಡಾ ಬಿ ಆರ್ ಅಂಬೇಡ್ಕರ್ ರಸ್ತೆಯಲ್ಲಿನ ಲೋಕೇಶ್ ಎಂಬವರ ಪಾನಿಪೂರಿ ಅಂಗಡಿಗೆ ತೆರಳಿ ಸ್ನೇಹಿತರ ಜೊತೆ ಮೂರು ಪ್ಲೇಟ್ ಪಾನಿಪೂರಿ ತಿಂದಿದ್ದಾನೆ. ಹಣವನ್ನು ಫೋನ್ ಪೇ ಮಾಡುವುದಾಗಿ ಹೇಳಿ ವ್ಯಾಪಾರಿ ಫೋನ್ ಪಡೆದು ಬೇರೊಬ್ಬನಿಗೆ ಕರೆ ಮಾಡಿದ್ದಾನೆ. ಆತ ದುಡ್ಡು ಕಳುಹಿಸಿದ್ದು ಒಮ್ಮೆ ಚೆಕ್ ಮಾಡಿ ಎಂದು ಹೇಳಿ ವ್ಯಾಪಾರಿ ಫೋನ್ ಪೇ ತೆರೆಯುವಾಗ ಪಾಸ್ ವರ್ಡ್ ನೋಡಿಕೊಂಡಿದ್ದಾನೆ.
ಸ್ವಲ್ಪ ಸಮಯದ ಬಳಿಕ ನಿಮ್ಮ ಫೋನ್ ನಲ್ಲಿ ಸರ್ವರ್ ಸಮಸ್ಯೆ ಇದೆ. ಪರಿಶೀಲಿಸುವುದಾಗಿ ಫೋನ್ ಪಡೆದು 30 ಸಾವಿರ ರೂ.ವನ್ನು ತನ್ನ ಖಾತೆಗೆ ಕಳುಹಿಸಿಕೊಂಡು ಪಾನಿಪೂರಿ ಹಣ 120 ರೂ. ಕಳುಹಿಸಿ ಟೋಪಿ ಹಾಕಿದ್ದ. ಈ ಬಗ್ಗೆ ಕಳೆದ 11 ರಂದು ಪ್ರಕರಣ ದಾಖಲಿಸಿಕೊಂಡ ಚಾಮರಾಜನಗರ ಸಿಇಎನ್ ಠಾಣೆ ಪಿಐ ಆನಂದ್ ಮತ್ತು ತಂಡ ಕಾರ್ಯಾಚರಣೆ ಕೈಗೊಂಡು 30 ಸಾವಿರ ರೂ. ಕಕ್ಕಿಸಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.
ಇದನ್ನೂ ಓದಿ : ತವರಿಗೆ ಹೋಗುತ್ತೇನೆ ಎಂದ ಪತ್ನಿ ಕೊಂದ ಪತಿ: ನಂತರ ಆತ್ಮಹತ್ಯೆಗೆ ಶರಣು
ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನ ಬಂಧನ: ಮಹಿಳೆಯೊಬ್ಬರ ವೀಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಚಾಮರಾಜನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಅಜಿತ್ ಬಂಧಿತ ಆರೋಪಿ. ಜಿಲ್ಲೆಯ ಮಹಿಳೆಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಈತ ಆಕೆಯೊಟ್ಟಿಗೆ ಸಲುಗೆ ಬೆಳೆಸಿಕೊಂಡು ಆಪ್ತವಾಗಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವ ಜೊತೆಗೆ ಬೆದರಿಕೆ ಒಡ್ಡುತ್ತಿದ್ದ.
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ: ಈ ಸಂಬಂಧ ನೊಂದ ಮಹಿಳೆ ಚಾಮರಾಜನಗರ ಸಿಒಎನ್ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಪಿಐ ಆನಂದ್ ಹಾಗೂ ತಂಡ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಸುಳ್ಳು ದಾಖಲೆ ಸೃಷ್ಟಿಸಿ ರೈಲ್ವೆ ನೌಕರಿ ಪಡೆದ ಭೂಪ: 32 ವರ್ಷಗಳ ನಂತರ ಪ್ರಕರಣ ಬೆಳಕಿಗೆ