ಚಾಮರಾಜನಗರ: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ವರನ ಮನೆ ನೋಡಲು ಬೆಂಗಳೂರಿನಿಂದ ಬಂದಿದ್ದ ಕಾರು ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರು-ಊಟಿ ಹೆದ್ದಾರಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಮುಂದೆ ಈ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಬೆಂಗಳೂರಿನ ನಾಗರಾಜಪ್ಪ ಮೃತಪಟ್ಟಿದ್ದು, ಶೈಲಜಾ, ಕಾವ್ಯ, ಮಂಜುನಾಥ ಎಂಬುವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
ಸಂಪೂರ್ಣ ನುಜ್ಜುಗುಜ್ಜಾಗಿದ್ದ ಕಾರಿಂದ ಗಾಯಾಳುಗಳನ್ನು ಹಾರೆಯಿಂದ ಬಾಗಿಲುಗಳನ್ನು ಮೀಟಿ ಹೊರತೆಗೆದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಯಿತು. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು:
ಶನಿವಾರ ರಾತ್ರಿ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗೇಟ್ ಬಳಿ ಆಯ ತಪ್ಪಿ ಬಿದ್ದಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ನಂಜನಗೂಡು ನಿವಾಸಿ ನಾಗೇಶ್ ನಾಯಕ ಮೃತಪಟ್ಟ ದುರ್ದೈವಿ. ವೀರನಪುರ ಗೇಟ್ ಬಳಿ ಬರುವಾಗ ಬೈಕ್ ಸವಾರ ನಾಗೇಶ್ ನಾಯಕ ಆಯ ತಪ್ಪಿ ಬಿದ್ದು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.