ಚಾಮರಾಜನಗರ: ಹುಲಿಯೊಂದು ದಾಳಿ ನಡೆಸಿ ಕುರಿಗಾಹಿಯನ್ನು ಅರ್ಧ ತಿಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆ ಎಂಬಲ್ಲಿ ಮಂಗಳವಾರ ನಡೆದಿದೆ. ಮೃತರನ್ನು ಆಡಿನ ಕಣಿವೆ ನಿವಾಸಿ ಬಸವ (54) ಎಂದು ಗುರುತಿಸಲಾಗಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇವರು ಬುಡಕಟ್ಟು ಜನಾಂಗದವರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದರು. ನಂತರ ಮನೆಗೆ ವಾಪಸಾಗದ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಹುಲಿ ದಾಳಿ ನಡೆಸಿ ಅರ್ಧ ತಿಂದಿರುವ ಬಸವ ಅವರ ದೇಹ ಪತ್ತೆಯಾಗಿದೆ. ಕೂಡಲೇ ಈ ಕುರಿತು ಕುಟುಂಬಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ಬೀಳು ಬಿದ್ದ ಜಮೀನಿನಲ್ಲಿ ಹುಲಿ ಹಾಗೂ ಹುಲಿ ಮರಿ ಕಳೇಬರ ಪತ್ತೆ
ಇತ್ತೀಚಿನ ಪ್ರಕರಣಗಳು: ಮೈಸೂರಲ್ಲಿ ದನಗಾಹಿ ಮಹಿಳೆ ಹುಲಿ ದಾಳಿಯಿಂದ ಸಾವನ್ನಪ್ಪಿದ್ದ ಘಟನೆ ನವೆಂಬರ್ನಲ್ಲಿ ನಡೆದಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮದಲ್ಲಿ ವೆಂಕಟಯ್ಯ ಎಂಬುವರ ಪತ್ನಿ ರತ್ನಮ್ಮ ಎಂಬುವವರನ್ನು ಹುಲಿ ಕೊಂದಿತ್ತು. ರತ್ನಮ್ಮ ಮಧ್ಯಾಹ್ನ ಸಮಯದ ವೇಳೆ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಬಳಿ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದರು. ಈ ವೇಳೆ ಹುಲಿ ದಾಳಿ ಮಾಡಿ ಹೊತ್ತೊಯ್ದಿತ್ತು. ರತ್ನಮ್ಮನ ಕಿರುಚಾಟವನ್ನು ಅಕ್ಕಪಕ್ಕದವರು ಕೇಳಿಸಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಆಗಮಿಸಿ ಕಾರ್ಯಾಚರಣೆ ನಡೆಸಿದ ಇಲಾಖೆ ರತ್ನಮ್ಮನವರ ಮೃತದೇಹವನ್ನು ಕಾಡಂಚಿನ ಪ್ರದೇಶದಿಂದ ಹೊರತಂದಿದ್ದರು.
ಇದಕ್ಕೂ ಮುನ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಣಸೂರು ವಲಯದ ಹತ್ತಿರ ರಿಸರ್ವ್ ಫಾರೆಸ್ಟ್ನಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ವ್ಯಕ್ತಿ ಕೂಡ ಹುಲಿ ದಾಳಿಯಿಂದ ಸಾವನ್ನಪ್ಪಿದ್ದ. ಹುಣಸೂರು ವಲಯದ ಹನಗೋಡು ವ್ಯಾಪ್ತಿಯ ಅಯ್ಯನಕೆರೆ ಹಾಡಿಯ ಬಳಿಯ ಉಡುವೆಪುರದ ರೈತ ಗಣೇಶ್ ಮೃತ ವ್ಯಕ್ತಿ. ಈತ ಎಂದಿನಂತೆ ಗ್ರಾಮದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಅಂಚಿನಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ. ಆದರೆ ಸಂಜೆಯಾದರು ಜಾನುವಾರುಗಳು ಮನೆಗೆ ಬಂದರೂ ಗಣೇಶ್ ಮನೆಗೆ ಹಿಂತಿರುಗಿರಲಿಲ್ಲ. ಬಳಿಕ ಮಾಹಿತಿ ಪಡೆದ ಅರಣ್ಯ ಇಲಾಖೆ ಬಂದು ಶೋಧ ನಡೆಸಿದಾಗ ಮೃತದೇಹ ಸಿಕ್ಕಿತ್ತು. ಈ ಘಟನೆ ಅಕ್ಟೋಬರ್ನಲ್ಲಿ ನಡೆದಿತ್ತು.