ಕೊಳ್ಳೇಗಾಲ: ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ವೃದ್ದನೋರ್ವನ ಬಳಿ ಚಾಲಕಿ ಕಳ್ಳ ಉಪಾಯದಿಂದ ಹಣ ಎಗರಿಸಿರುವ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಜಡೇರುದ್ರಪ್ಪ(70) ಹಣ ಕಳೆದುಕೊಂಡಿದ್ದಾರೆ.
ಪಟ್ಟಣದ ರಾಜ್ ಕುಮಾರ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ಗೆ ಬಂದಿದ್ದ ವೃದ್ಧ, ಹಣ ತೆಗೆದುಕೊಂಡು ತನ್ನ ಬ್ಯಾಗ್‌ನಲ್ಲಿ ಪಾಸ್‌ಬುಕ್ ಹಾಗೂ ಚೆಕ್ ಪುಸ್ತಕ ಸಮೇತ ತೆರಳುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಕಳ್ಳ ವೃದ್ಧನಿಗೆ ನಿಮ್ಮ ಶರ್ಟ್ ಹಿಂಭಾಗ ಕೆಸರು ಮೆತ್ತಿದೆ ಒರೆಸಿಕೊಳ್ಳಿ ಎಂದು ಹೇಳಿದ್ದಾನೆ.
ಈ ವೇಳೆ ವೃದ್ಧ ಬ್ಯಾಗ್ ಅನ್ನು ಪಕ್ಕದಲ್ಲಿದ್ದ ಸೇತುವೆಯ ಮೇಲಿಟ್ಟು ಶರ್ಟ್ ತೊಳೆದುಕೊಳ್ಳಲು ಮುಂದಾದಾಗ ಖದೀಮ ಹಣದ ಬ್ಯಾಗ್ ಲಪಾಟಿಸಿಕೊಂಡು ಪರಾರಿಯಾಗಿದ್ದಾನೆ. ವೃದ್ಧ ತಿರುಗಿ ನೋಡುವಷ್ಟರಲ್ಲಿ ಸೇತುವೆಯ ಮೇಲಿಟ್ಟಿದ್ದ ಬ್ಯಾಗ್ ನಾಪತ್ತೆಯಾಗಿದೆ. ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಪರಾಧ ವಿಭಾಗದ ಪಿಎಸ್ಐ ಮಾದೇಗೌಡ ಅವರು ಪರಿಶೀಲನೆ ನಡೆಸಿದ್ದಾರೆ.