ಕೊಳ್ಳೇಗಾಲ: ಹೆಂಡತಿ ಮೃತರಾದ ಬಳಿಕ ಕೆಲಸ ಹುಡುಕಿ ಬೇಸತ್ತು, ಅಲೆಮಾರಿಯಾದ ವ್ಯಕ್ತಿಯೊಬ್ಬ ಇತ್ತ ಕೆಲಸವೂ ಸಿಗದೇ, ಆರೋಗ್ಯವು ಸರಿಯಿಲ್ಲದೆ ಜೀವನದಲ್ಲಿ ಜಿಗುಪ್ಸೆಗೊಂಡು ಲಾಡ್ಜ್ವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಇಲವಾಲ ಮೂಲದ ಸ್ವಾಮಿ(56) ಮೃತ ದುರ್ದೈವಿ. ಈತ ತನ್ನ ಹೆಂಡತಿ ಮೃತರಾದ ಬಳಿಕ ಕೆಲಸ ಹುಡುಕುತ್ತ ಅಲೆಮಾರಿ ಜೀವನ ನಡೆಸುತ್ತಿದ್ದು, ಅನಾರೋಗ್ಯದಿಂದಲೂ ಬಳಲುತ್ತಿದ್ದರು. ಕಳೆದ ತಿಂಗಳು 25 ರಂದು ಕೆಲಸ ಅರಿಸಿ ಕೊಳ್ಳೇಗಾಲಕ್ಕೆ ಬಂದ ಸ್ವಾಮಿ, ಪಟ್ಟಣದ ವಿಜಯಲಕ್ಷ್ಮಿ ಲಾಡ್ಜ್ ನಲ್ಲಿ ರೂಮ್ ಮಾಡಿ ಉಳಿದುಕೊಂಡಿದ್ದರು. ಇವರು ಹಲವು ದಿನಗಳಿಂದ ರೂಮ್ನಿಂದ ಹೊರ ಬಾರದೇ ಇರುವುದನ್ನು ಗಮನಿಸಿದ ಲಾಡ್ಜ್ ಮ್ಯಾನೇಜರ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ರೂಮ್ ಮಾಡುವಾಗ ನೀಡಿದ್ದ ವಿಳಾಸ ಸಂಪರ್ಕಿಸಿ ಮಗನಿಗೆ ಕರೆ ಮಾಡಿ ಬರ ಹೇಳಿದ್ದಾರೆ. ಬಳಿಕ ರೂಮ್ ಬಾಗಿಲು ಮುರಿದು ನೋಡಿದಾಗ ಸ್ವಾಮಿಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ರೂಮ್ ಪರೀಶಿಲಿಸಿದಾಗ ವಿಷದ ಬಾಟಲ್ ದೊರಕಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.