ಚಾಮರಾಜನಗರ: ಜಿಲ್ಲೆಯ ಬಹುತೇಕ ರೈತರು ಉದ್ದಿನ ಕಾಳಿಗೆ ಹಳದಿ ನಂಜು ರೋಗ ಬಾಧಿಸುತ್ತಿರುವುದರಿಂದ ಕೈ ಸುಟ್ಟುಕೊಂಡರೆ, ಚಾಮರಾಜನಗರ ತಾಲೂಕಿನ ಕೆ.ಮೂಕಳ್ಳಿ ರೈತರೊಬ್ಬರು LBG-791 ಎನ್ನುವ ಹೊಸ ತಳಿ ಉದ್ದು ಬಿತ್ತನೆ ಮಾಡಿ, ಮಳೆ ಅಭಾವದ ನಡುವೆಯೂ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಳ್ಳದ ಪೂರ್ವ ಮುಂಗಾರಿನ ಉಷ್ಣತೆಗೆ ಸರಿಹೊಂದದ ವಿವಿಧ ತಳಿಯ ಉದ್ದು ಬಿತ್ತನೆ ಮಾಡಿ ಚಾಮರಾಜನಗರ ತಾಲೂಕಿನ ಬಹುಪಾಲು ರೈತರು ನಷ್ಟ ಅನುಭವಿಸಿದ್ದರು. ಚಾಮರಾಜನಗರ ತಾಲೂಕಿನ ಕೆ.ಮೂಕಳ್ಳಿ ಗ್ರಾಮದ ಶಿವಶಂಕರ್ ಎಂಬುವವರು ಮಾತ್ರ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಒದಗಿಸಿದ LBG-791 ಎಂಬ ತಳಿಯನ್ನು ಕಡಿಮೆ ನೀರಿನಲ್ಲಿ ಕೇವಲ 70 ದಿನಗಳ ಅವಧಿಯಲ್ಲಿ ಉತ್ತಮವಾಗಿ ಬೆಳೆದಿದ್ದಾರೆ. ಹಳದಿ ರೋಗದಿಂದ ದೂರವಿರುವ ಈ ತಳಿ ಉತ್ತಮ ಇಳುವರಿಯಿಂದ ಕಂಗೊಳಿಸುತ್ತಿದೆ.
ಹಳದಿ ನಂಜು ರೋಗದಿಂದ ದೂರ: ಸುತ್ತಮುತ್ತಲಿನ ರೈತರ ಪೈಕಿ ಇವರು ಮಾತ್ರ LBG-791 ತಳಿಯನ್ನು ಒಂದು ಎಕರೆ ಪ್ರದೇಶದಲ್ಲಿ ಕೃಷಿ ಬೆಳೆದಿದ್ದಾರೆ. ಐದು ದಿನಗಳಲ್ಲಿ ಕಟಾವು ಮಾಡಲಾಗುವ ಉದ್ದಿನಕಾಳು ತುಂಬಾ ಹೊಳಪಿನಿಂದ ಕೂಡಿದೆ. ಒಂದು ಗಿಡದಲ್ಲಿ ಸರಾಸರಿ 30-35 ಕಾಯಿಗಳು ಬಿಟ್ಟಿವೆ. ಇಲ್ಲಿ ಕಾಡು ಹಂದಿಗಳ ದಾಳಿಯನ್ನು ಹೊರತುಪಡಿಸಿ ಬೂದಿರೋಗ, ಹಳದಿ ನಂಜು ರೋಗದ ದಾಳಿಯಿಂದ ಈ ತಳಿ ದೂರವಿದೆ.
ಕೆವಿಕೆ ಚಾಮರಾಜನಗರದ ಕೃಷಿ ವಿಜ್ಞಾನಿ ಸುನೀಲ್ ಈಟಿವಿ ಭಾರತದೊಂದಿಗೆ ಮಾತನಾಡಿ, 2021-22ನೇ ಸಾಲಿನಲ್ಲಿ ಜಿಲ್ಲೆ ಕೃಷಿ ಪ್ರಾತ್ಯಕ್ಷಿಕೆ ಮಾಡುವ ಮೂಲಕ LBG- 791ತಳಿಯ ಉದ್ದನ್ನು ಪರಿಚಯಿಸಿದ್ದೇವೆ. ಈ ತಳಿಯ ಉದ್ದು ಬೂದಿ ರೋಗ ಮತ್ತು ಹಳದಿ ನಂಜು ರೋಗಗಳನ್ನು ತಾಳುವ ಸಾಮರ್ಥ್ಯ ಹೊಂದಿದ್ದು, ಕಡಿಮೆ ನೀರಾವರಿಗೆ ಹೊಂದಿಕೊಳ್ಳಲಿದೆ. ಇದು 70 ರಿಂದ 75 ದಿನಗಳಲ್ಲಿ ಕಟಾವಿಗೆ ಬರಲಿದ್ದು, ಎಕರೆಗೆ ಸುಮಾರು 2ರಿಂದ 3 ಕ್ವಿಂಟಾಲ್ ಕಾಳನ್ನು ಪಡೆಯಬಹುದು.
ತಳಿಯಿಂದ ಹೆಚ್ಚು ಆದಾಯ: ಜಿಲ್ಲೆಯಲ್ಲಿ ಸುಮಾರು 100 ರಿಂದ 120 ಎಕರೆ ಪ್ರದೇಶದಲ್ಲಿ ಈ ತಳಿಯನ್ನು ಬಿತ್ತನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದರ ಬಿತ್ತನೆ ಬೀಜ ಸಿಗಲಿದೆ. ರೈತರಿಗೆ ತಕ್ಷಣದಲ್ಲಿ ಈ ತಳಿಯ ಬಿತ್ತನೆ ಬೀಜ ಬೇಕೆಂದರೆ ಮಂಡ್ಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಪಡೆಯಬಹುದು. ಈ ತಳಿಯಿಂದ ರೈತರು ಹೆಚ್ಚು ಆದಾಯಗಳಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ತಳಿಗಳ ಉದ್ದಿನ ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿರುವ ರೈತರಿಗೆ LBG- 791ಎನ್ನುವ ಹೊಸ ತಳಿ ಹಳದಿ ನಂಜುರೋಗದಿಂದ ದೂರವಿದ್ದು, ಉತ್ತಮ ಇಳುವರಿ ನೀಡುವ ಬಿತ್ತನೆ ಬೀಜವಾಗಿದೆ. ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನ ಹಾಗೂ ಸಹಾಯ ಪಡೆದು ಕೇವಲ ಒಂದು ಎಕರೆ ಪ್ರದೇಶದಲ್ಲಿ ಕಡಿಮೆ ಅವಧಿ ಹಾಗೂ ಕಡಿಮೆ ನೀರಾವರಿಯಲ್ಲಿ ಎರಡರಿಂದ ಮೂರು ಕ್ವಿಂಟಾಲ್ ಉದ್ದು ಪಡೆದು ಲಾಭಪಡೆಯಲಿದ್ದಾರೆ ಎಂಬುದಕ್ಕೆ ಮೂಕ್ಕಳ್ಳಿ ರೈತ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: 70 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ