ಚಾಮರಾಜನಗರ: ತಮಿಳುನಾಡಿನ ಓಂಶಕ್ತಿಗೆ ತೆರಳಿದ್ದ ವೇಳೆ 14 ವರ್ಷದ ಬಾಲಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಕಣ್ಣೇಗಾಲ ಗ್ರಾಮದ 14 ವರ್ಷದ ಬಾಲಕನೊಬ್ಬ ಓಂಶಕ್ತಿಯಿಂದ ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಮರಣಾನಂತರ ನಡೆದ ಕೊರೊನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಬಾಲಕ ಮೂರ್ಚೆ ರೋಗದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ಬಾಲಕನಿದ್ದ 55 ಮಂದಿ ಯಾತ್ರಿಗಳ ಗುಂಪಿನಲ್ಲಿ 22 ಮಂದಿಗೆ ಸೋಂಕು ವಕ್ಕರಿಸಿದೆ. ಎಲ್ಲರನ್ನೂ ಕೊಳ್ಳೇಗಾಲ ಹಾಗೂ ಚಾಮರಾಜನಗರ ಕೋವಿಡ್ ಕೇಂದ್ರದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.
ಇದಲ್ಲದೇ, ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಭಾನುವಾರ 26, ಸೋಮವಾರ 40 ಕೇಸ್ಗಳು ಪತ್ತೆಯಾಗಿದ್ದು, ಇಂದು 80ಕ್ಕೂ ಹೆಚ್ಚು ಬರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಲಬುರಗಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ!