ಚಾಮರಾಜನಗರ: ಕೊರೊನಾ ಎರಡನೇ ಅಲೆ ಆರಂಭವಾದ ಹಿನ್ನೆಲೆ ಆರೋಗ್ಯ ಇಲಾಖೆ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆ ಸಾಮಾರ್ಥ್ಯದ ಕೋವಿಡ್ ಆಸ್ಪತ್ರೆ, ಸಂತೇಮರಹಳ್ಳಿಯ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್, ಕೊಳ್ಳೇಗಾಲ ಉಪವಿಭಾಗ, ಗುಂಡ್ಲುಪೇಟೆ, ಯಳಂದೂರು ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪುನಾರಂಭ ಮಾಡಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ರವಿ ತಿಳಿಸಿದ್ದಾರೆ.
ಓದಿ : ಚಾಮರಾಜನಗರದಲ್ಲಿ ಸಿರಿಂಜ್ನಲ್ಲಿ ಚಾಕೋಲೆಟ್ ಮಾರಾಟ: ಆರೋಗ್ಯಾಧಿಕಾರಿಗಳ ದಾಳಿ, ಪರಿಶೀಲನೆ
ಜಿಲ್ಲೆಯಲ್ಲಿ 90 ಸಾವಿರಕ್ಕೂ ಹೆಚ್ಚಿನ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ 60 ವರ್ಷ ಮೇಲ್ಪಟ್ಟ 54,690 ಮಂದಿ, 45 ವರ್ಷ ಮೇಲ್ಪಟ್ಟ 21,231 ಮಂದಿಗೆ ವ್ಯಾಕ್ಸಿನ್ ನೀಡಲಾಗಿದ್ದು, ಆರೋಗ್ಯ ಕಾರ್ಯಕರ್ತರು, ಕಂದಾಯ, ನಗರಸಭೆ ಸಿಬ್ಬಂದಿ ಸೇರಿದಂತೆ 90 ಸಾವಿರ ಮಂದಿಗೆ ಲಸಿಕೆ ಕೊಡಲಾಗಿದೆ. ಸರಾಸರಿ ದಿನವೊಂದಕ್ಕೆ 3ರಿಂದ 4 ಸಾವಿರ ಮಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಲಸಿಕೆಯ ಎರಡು ಡೋಸ್ಗಳ ನಡುವೆ 4-6 ವಾರ ಅಂತರವಿತ್ತು. ಹೊಸ ಅಧ್ಯಯನದ ಪ್ರಕಾರ 6-8 ವಾರಗಳ ನಡುವೆ ವ್ಯಾಕ್ಸಿನ್ ನೀಡಿದಾಗ ಪರಿಣಾಮ ಹೆಚ್ಚು ಇರಲಿದೆ ಎಂಬುವುದು ತಿಳಿದಿದ್ದರಿಂದ ಈಗ 6-8 ವಾರಗಳ ನಡುವೆ ಕೋವಿಶೀಲ್ಡ್ ಎರಡನೇ ಡೋಸ್ ನೀಡಲಾಗುತ್ತಿದೆ. ಲಸಿಕೆ ನೀಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಡಿಹೆಚ್ಒ ಹೇಳಿದ್ದಾರೆ.