ಚಾಮರಾಜನಗರ: ಇಂದಿನಿಂದ ಪೂರ್ಣಾವಧಿ ತರಗತಿ ಆರಂಭವಾದ 6,7, ಹಾಗೂ 8ನೇ ತರಗತಿಗೆ ಜಿಲ್ಲೆಯಲ್ಲಿ ಶೇ.85 ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಪಾಠ ಕೇಳಿದ್ದಾರೆ.
ಬಿಸಿಯೂಟ ವ್ಯವಸ್ಥೆ ಆರಂಭವಾಗದ ಹಿನ್ನೆಲೆಯಲ್ಲಿ ದೂರದೂರಿನವರು ಮನೆಯಿಂದ ಬುತ್ತಿ ತಂದರೇ ಸ್ವಗ್ರಾಮದ ವಿದ್ಯಾರ್ಥಿಗಳು ಮನೆ ಆಶ್ರಯಿಸಿದ್ದಾರೆ. ವಿದ್ಯಾಗಮ, ಆನ್ಲೈನ್ ತರಗತಿಯಿಂದ ಹೊರಬಂದ ವಿದ್ಯಾರ್ಥಿಗಳು ಶಾಲೆಯ ವಾತವರಣಕ್ಕೆ ಮುದಗೊಂಡರು.
ಇನ್ನು ಕೇರಳದಲ್ಲಿನ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ 4 ಗ್ರಾ.ಪಂ ವ್ಯಾಪ್ತಿಯ 21 ಶಾಲೆಗಳು ಮೊದಲ ದಿನ ಕಾರ್ಯಾರಂಭ ಮಾಡಲಿಲ್ಲ. ಕೇರಳ ಗಡಿಗೆ ಹೊಂದಿಕೊಂಡಿರುವ ನಾಲ್ಕು ಗ್ರಾ.ಪಂಗಳಾದ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು, ಕೂತನೂರು, ಬೇರಂಬಾಡಿಮತ್ತು ಕನ್ನೇಗಾಲ ಗ್ರಾಪಂ ವ್ಯಾಪ್ತಿಯ 21 ಶಾಲೆಗಳು ಸೋಮವಾರ ತೆರಿದಿರಲಿಲ್ಲ.
ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮಂಗಳವಾರ ತೆರೆಯಲಾಗುತ್ತದೆ ಎಂದು ತಿಳಿದು ಬಂದಿದೆ. ಕೆಲ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭಗೊಂಡರೂ, ಹಾಸ್ಟೆಲ್ ಸಮಸ್ಯೆ, ಸೂಕ್ತ ಸಾರಿಗೆ ಸಂಪರ್ಕ ಇಲ್ಲದಿರುವುದು ತಲೆನೋವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕಿದೆ.