ಚಾಮರಾಜನಗರ: ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೆಂದ್ರೆ ಆನ್ಲೈನ್ ಕ್ಲಾಸ್, ಟ್ಯೂಷನ್, ಆಟ, ಮೊಬೈಲ್ನಲ್ಲೇ ಮುಳುಗಿರುತ್ತಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಮಾತ್ರ ಶಿಕ್ಷಣದ ಜೊತೆಗೆ ನೇಗಿಲು ಹಿಡಿದು, ಉಳುಮೆ ಮಾಡುತ್ತಾ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನಾಗರಾಜ್ ಹಾಗೂ ಸಾವಿತ್ರಮ್ಮ ದಂಪತಿ ಮಗನಾದ ಸೂರ್ಯ 7 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಶಾಲೆ ಇನ್ನೂ ಪ್ರಾರಂಭವಾಗದ ಹಿನ್ನೆಲೆ ನೇಗಿಲು ಹಿಡಿದು ಚಾಕಚಕ್ಯತೆಯಿಂದ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾನೆ.
ಸೂರ್ಯನಿಗೆ ತಂದೆ-ತಾಯಿ ಸಾಥ್:
ಆನ್ಲೈನ್ ತರಗತಿ ಮುಗಿದ ಬಳಿಕ ಸೂರ್ಯ, ನೊಗ ಏರಿಸಿಕೊಂಡು ಎತ್ತುಗಳೊಂದಿಗೆ ಜಮೀನಿಗೆ ಬಂದು ಜೋಳಕ್ಕೆ ಪಟ್ಟೆ ಹೊಡೆಯುವುದು, ಕಬ್ಬು, ರಾಗಿ, ಕಡ್ಲೆಕಾಯಿ ಬೆಳೆಗೆ ಕುಂಟೆ ಹೊಡೆಯುವುದು, ಕಳೆ ಕೀಳುವುದು ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ. ಕೃಷಿ ಕುರಿತು ಸೂರ್ಯನ ಆಸಕ್ತಿ ಕಂಡ ಪಾಲಕರು, ಸಹೋದರರು ಈತನಿಗೆ ವಿವಿಧ ಚಟುವಟಿಕೆಗಳನ್ನು ಕಲಿಸುತ್ತಿದ್ದಾರೆ. ಅದೇ ರೀತಿ ಉತ್ತಮವಾಗಿ ಓದಲು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸೂರ್ಯನ ಸಹೋದರ ಸುನೀಲ್, 'ಸೂರ್ಯನಿಗೆ ಕೃಷಿಯಲ್ಲಿ ಅಪಾರ ಆಸಕ್ತಿ ಇದ್ದು, ಶಾಲೆ ತೆರೆಯದಿರುವುದರಿಂದ ಆನ್ಲೈನ್ ತರಗತಿ ಇಲ್ಲವೆಂದ್ರೆ ನೇಗಿಲು ಹಿಡಿದು ಹೊಲಕ್ಕೆ ಬರುತ್ತಾನೆ. ಎತ್ತು, ಹಸುಗಳು ಅವನ ಮಾತನ್ನು ಕೇಳಲಿದ್ದು, ಚೆನ್ನಾಗಿ ವ್ಯವಸಾಯ ಮಾಡುತ್ತಿದ್ದಾನೆ. ಮನೆಯಲ್ಲಿ ಮೊಬೈಲ್ ಹಿಡಿದು ಕೂರದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ನಮಗೆ ಸಂತೋಷ ನೀಡಿದೆ' ಎಂದರು.
ಹಸು ಅಂದ್ರೆ ನನಗಿಷ್ಟ:
'ನಾನು ಜಿ.ವಿ. ಗೌಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದೇನೆ. ಆನ್ಲೈನ್ ತರಗತಿ ಇಲ್ಲದಿದ್ದಾಗ ಜಮೀನಿಗೆ ಬಂದು ಏನು ಕೆಲಸವಿದೆಯೋ ಅದನ್ನು ಮಾಡುತ್ತೇನೆ. ಈಗ ಸದ್ಯಕ್ಕೆ ನಮ್ಮ ಜಮೀನಿನಲ್ಲಿ ಅವರೆ ಬೆಳೆ ಹಾಕುತ್ತಿರುವುದರಿಂದ ಪಟ್ಟೆ, ಕುಂಟೆ ಹೊಡೆಯುತ್ತಿದ್ದೇನೆ. ನಾನು ಎಷ್ಟೇ ಓದಿದರೂ ಕೂಡ ಕೃಷಿ ಮಾತ್ರ ಬಿಡುವುದಿಲ್ಲ. ಹಸುಗಳೆಂದ್ರೆ ನನಗಿಷ್ಟ. ತಂದೆ-ತಾಯಿ ಕೂಡ ನನ್ನ ಕಾರ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ' ಎಂದು ಬಾಲ ನೇಗಿಲಯೋಗಿ ಸೂರ್ಯ ತಿಳಿಸಿದ್ದಾನೆ.
ಒಟ್ಟಿನಲ್ಲಿ ಜೀವನ ಪರಿಪೂರ್ಣವಾಗಿರಬೇಕೆಂಬ ಮಾತಿಗೆ ಸೂರ್ಯನ ಈ ಕೃಷಿ ಚಟುವಟಿಕೆ ಅಡಿಪಾಯ ಹಾಕಿದೆ. ಕೇವಲ ಮೊಬೈಲ್ ನಲ್ಲಿ ಟೈಂ ವ್ಯರ್ಥ ಮಾಡದೇ, ಸಮಯ ಸದಪಯೋಗ ಮಾಡಿಕೊಳ್ಳುವ ಮೂಲಕ ಈ ಬಾಲಕ ಮಾದರಿಯಾಗಿದ್ದಾನೆ.