ಚಾಮರಾಜನಗರ: ಒಬ್ಬ ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು, ಅದನ್ನು ನಾವು ಆಹಾರ ಭದ್ರತೆಯಡಿ 4.1 ಕೋಟಿ ಫಲಾನುಭವಿಗಳಿಗೆ ವಿತರಿಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಎಂದು ಹೇಳಿದ್ದಾರೆ.
ಬಂಡೀಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು. ಆದರೆ, ರಾಜಕೀಯ ಕಾರಣದಿಂದ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧವೇ ಕಿಡಿಕಾರಿದ ಅವರು, ಪಡಿತರದಾರರ ಇಕೆವೈಸಿ ಶೇ. 70 ಮುಗಿದಿದ್ದು, ಅನರ್ಹ ಪಡಿತರದಾರರನ್ನು ಕೈಬಿಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯುತ್ತಿದೆ. ಸಂಪೂರ್ಣ ಇಕೆವೈಸಿ ಆದ ಬಳಿಕ ಎಷ್ಟು ಪಡಿತರ ಉಳಿತಾಯ ಆಗಲಿದೆ ಎನ್ನುವುದು ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನಗೀಗ 60 ವರ್ಷ ವಯಸ್ಸು. ಆದ್ದರಿಂದ ಇನ್ನೂ 15 ವರ್ಷವಿದ್ದು, ನಾನು ಪರ್ಮನೆಂಟ್ ಸಿಎಂ ಆಕಾಂಕ್ಷಿ. ಮುಂದೆ ನೋಡೋಣ ಎಂದು ಸಿಎಂ ಆಗುವ ಬಯಕೆಯನ್ನು ಮತ್ತೊಮ್ಮೆ ಹೊರಹಾಕಿದರು. ಕ್ರಾಂತಿಕಾರಕ ಯೋಜನೆ ತರುತ್ತೇನೆಂದು ಹೇಳಿರುವ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅಧಿಕಾರಕ್ಕೆ ಬರುವುದಿಲ್ಲ. ಆದ್ದರಿಂದಲೇ ಈ ಮಾತು ಆಡುತ್ತಿದ್ದಾರೆ ಎಂದು ಕುಟುಕಿದರು.
ರಸ್ತೆ ಅಗಲೀಕರಣಕ್ಕೆ ಅವಕಾಶ ಕೊಡಲ್ಲ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಅಗಲೀಕರಣದ ಪ್ರಸ್ತಾಪಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆಯಲಾಗಿದೆ. ಯಾವ ಕಾರಣಕ್ಕೂ ರಸ್ತೆ ಅಗಲೀಕರಣ ಮತ್ತು ರಾತ್ರಿ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಚಿವ ಕತ್ತಿ ಸ್ಪಷ್ಟಪಡಿಸಿದರು.