ಚಾಮರಾಜನಗರ : ಯಾವುದೇ ದಾಖಲಾತಿ ಇಲ್ಲದೇ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟಿನಲ್ಲಿ ನಡೆದಿದೆ. ಕೇರಳದ ಎರ್ನಾಕುಲಂ ನಿವಾಸಿ ಸಜಿ ಬಿನ್ ವರ್ಗೀಸ್ ಹಣ ಸಾಗಾಟ ಮಾಡುತ್ತಿದ್ದ ಆರೋಪಿ. ದಾಖಲೆ ಇಲ್ಲದೇ ಹಣವನ್ನು ಗುಂಡ್ಲುಪೇಟೆ ಕಡೆಗೆ ಹಣ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಪಿಐ ಶ್ರೀಕಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 45 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಸಜಿ ವಿರುದ್ಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಈತ ಚಲಾಯಿಸುತ್ತಿದ್ದ ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
ತಿಂಗಳಲ್ಲಿ 115 ಕಡೆ ಅಬಕಾರಿ ದಾಳಿ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಸುತ್ತಿರುವ ಹಿನ್ನೆಲೆಯಲ್ಲಿ ಮತದಾರನ್ನು ಸೆಳೆಯಲು ಕೆಲವರು ಮದ್ಯದ ಆಮಿಷವೊಡ್ಡುತ್ತಾರೆ. ಇದು ಕಾನೂನು ಬಾಹಿರ ಅದಕ್ಕಾಗಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಕಾರ್ಯ ಪ್ರವೃತ್ತವಾಗಿದ್ದು, ಚಾಮರಾಜನಗರ ಜಿಲ್ಲೆ ಅಬಕಾರಿ ಇಲಾಖೆಯು ಸಹ ಫುಲ್ ಅಲರ್ಟ್ ಆಗಿದೆ. ಇದರ ಪ್ರತಿಫಲವಾಗಿ ಒಂದೇ ತಿಂಗಳಲ್ಲಿ ಸುಮಾರು 115 ಕಡೆ ದಾಳಿ ನಡೆಸಿದೆ. ಕಳೆದ ತಿಂಗಳ ಫೆ.19 ರಿಂದ ಈ ತಿಂಗಳ ಮಾರ್ಚ್ 20 ರ ವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 115 ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 58 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳಿಂದ 85 ಪ್ರಕರಣಗಳೂ ಕೂಡ ದಾಖಲಾಗಿದ್ದು, ಕಾರ್ಯಾಚರಣೆ ವೇಳೆ 96 ಲೀ. ಮದ್ಯ, 1 ಲೀ. ಬಿಯರ್, 3 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯ, ವಾಹನಗಳು ಸೇರಿ ಇವುಗಳ ಮೌಲ್ಯ ಅಂದಾಜು ಒಂದೂವರೆ ಲಕ್ಷ ರೂ. ಆಗಿದೆ. ಅಬಕಾರಿ ಅಧಿಕಾರಿ ದಾಳಿ ನಡೆಸಿದ ವೇಳೆ ಸದ್ವರ್ತನೆ ತೋರಲು ಹಳೇ ಹಾಗೂ ಹೊಸ ಆರೋಪಿಗಳು ಸೇರಿದಂತೆ ಒಟ್ಟು 40 ಆರೋಪಿಗಳಿಂದ ಬಾಂಡ್ನ್ನು ಅಬಕಾರಿ ಇಲಾಖೆಯು ವಶಕ್ಕೆ ಪಡೆದಿದೆ.
ಸೂಕ್ಷ್ಮ ಸನ್ನದುಗಳ ಗುರುತು, ದಿಢೀರ್ ದಾಳಿ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಕೊಳ್ಳೇಗಾಲ ತಾಲೂಕಿನಲ್ಲಿ 10, ಚಾಮರಾಜನಗರ ತಾಲೂಕಿನಲ್ಲಿ 12, ಗುಂಡ್ಲುಪೇಟೆ ತಾಲೂಕಿನಲ್ಲಿ 14 ಸೂಕ್ಷ್ಮ ಸನ್ನದುಗಳನ್ನು ಗುರುತಿಸಲಾಗಿದ್ದು, ದಿಢೀರ್ ದಾಳಿಗಳನ್ನು ಇಲಾಖೆ ಹೆಚ್ವಿಸಿದೆ. ಯಳಂದೂರು ತಾಲೂಕಿನಲ್ಲಿರುವ ಗುರುಕೃಪ ವೈನ್ಸ್ ಎಂಬ ಸನ್ನದಿಗೆ ದಿಢೀರ್ ದಾಳಿ ನಡೆಸಿ ದಾಸ್ತಾನು ಸಂಖ್ಯೆ ತಾಳೆಯಾಗದಿರುವುದರಿಂದ 1555 ಲೀ. ಮದ್ಯ, 670 ಲೀ. ಬಿಯರ್ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 8 ಲಕ್ಷ ರೂ. ಎಂದು ಅಬಕಾರಿ ಆಯುಕ್ತರು ಮಾಹಿತಿ ನೀಡಿದರು.
ಇದನ್ನೂ ಓದಿ :ಕೊಳ್ಳೇಗಾಲದಲ್ಲಿ ತಿಮಿಂಗಲ ವಾಂತಿ ಸಾಗಾಟ: ಮಾಲು ಸಮೇತ ನಾಲ್ವರ ಬಂಧನ