ಚಾಮರಾಜನಗರ: ಹುಟ್ಟುಹಬ್ಬದ ಬಿರಿಯಾನಿ ತಿಂದು 24 ಮಂದಿ ಅಸ್ವಸ್ಥರಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಅರೇಪಾಳ್ಯ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಕುಮಾರ್ ಎಂಬವರ ಮಗನ ಹುಟ್ಟುಹಬ್ಬ ಸೋಮವಾರ ನಡೆದಿತ್ತು. ಹುಟ್ಟುಹಬ್ಬಕ್ಕೆ ಎಲ್ಲರಿಗೂ ಬಿರಿಯಾನಿ ಮಾಡಿಸಿದ್ದರಂತೆ. ಹಾಗೆಯೇ ನಿನ್ನೆ ಉಳಿದಿದ್ದ ಬಿರಿಯಾನಿಯನ್ನು ತೋಟದ ಕೂಲಿಯಾಳುಗಳಿಗೆ ಸಂತೋಷ್ ತಂದು ಕೊಟ್ಟಿದ್ದು, ಅದನ್ನು ಸೇವಿಸಿದ 24 ಮಂದಿ ಅಸ್ವಸ್ಥರಾಗಿದ್ದಾರೆ.
ಬಿರಿಯಾನಿ ತಿಂದ ಕೂಲಿ ಕಾರ್ಮಿಕರಿಗೆ ವಾಂತಿ ಭೇದಿ ಶುರುವಾಗಿದ್ದು,ಇವರಲ್ಲಿ ಪುಟ್ಟ ಲಕ್ಷಮ್ಮ, ಮೇಘ, ಲಾವಣ್ಯ, ಕಮಲ, ಯಶವಂತ್ ಸೇರಿದಂತೆ 24 ಜನ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎನ್.ಮಹೇಶ್ ಅಸ್ವಸ್ಥರ ಆರೋಗ್ಯವನ್ನು ವಿಚಾರಿಸಿದ್ದು, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.