ಚಾಮರಾಜನಗರ : ವಸತಿ ಇಲಾಖೆಯಲ್ಲಿ ಗಣನೀಯ ಸಾಧನೆಯಾಗಿದೆ. ಈವರೆಗೆ 2.74 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅಲೆಮಾರಿ, ಕಾಡುಗೊಲ್ಲರಿಗೆ 69 ಸಾವಿರ ಮನೆ ಹಂಚಿಕೆ ಮಾಡಲಾಗಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಈ ವರ್ಷ ಗ್ರಾಮೀಣ ಭಾಗದಲ್ಲಿ 4 ಲಕ್ಷ ಹಾಗೂ ನಗರ ಭಾಗದಲ್ಲಿ 1 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ.
ಈ ಹಿಂದೆ 4 ಕಂತುಗಳಲ್ಲಿ ಕೊಡುತ್ತಿದ್ದ ಅನುದಾನವನ್ನು 3 ಕಂತುಗಳಲ್ಲೇ ಕೊಡಲಾಗುತ್ತಿದೆ. ಜೊತೆಗೆ ಕಡ್ಡಾಯ ಅಡಮಾನ ನೋಂದಣಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಾಮರಾಜನಗರ ಎಲ್ಲಾ ಇಲಾಖೆ ಡಿಡಿಗಳಿಗೆ ಸೋಮಣ್ಣ ಚಾಟಿ: ಡಿಸಿ, ಸಿಇಒ, ಎಸ್ಪಿಗೂ ಮಿನಿಸ್ಟರ್ ಪಾಠ
ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೂ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವದಡಿ ಪ್ರಜಾಸತ್ತಾತ್ಮಕ ಗಣರಾಜ್ಯದ ಪರಿಕಲ್ಪನೆ ಅಳವಡಿಸಿಕೊಂಡು, ಎಲ್ಲರ ಸಹಾಭಾಗಿತ್ವದಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಗೋಣ ಎಂದರು.
ಎಸ್ಪಿ ಗೈರು- ಸಾಂಸ್ಕೃತಿಕ ಕಾರ್ಯಕ್ರಮ ರದ್ದು: ಕೊರೊನಾ ಹಿನ್ನೆಲೆ ಸರಳವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದೇ ಆಕರ್ಷಕ ಪಥ ಸಂಚಲನಕ್ಕಷ್ಟೇ ಸೀಮಿತವಾಯಿತು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಗೈರಾಗಿದ್ದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ