ಚಾಮರಾಜನಗರ: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧರ್ಮಸಭೆ ಇದೀಗ ಭಾರಿ ಆತಂಕಕ್ಕೆ ಕಾರಣವಾಗಿದ್ದು, ಜಿಲ್ಲೆಯ 12 ಮಂದಿ ಭಾಗವಹಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ಮಂದಿಯಲ್ಲಿ ಕೊಳ್ಳೇಗಾಲದ 3 ಮಂದಿಯನ್ನು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕ್ವಾರಂಟೈನ್ ನಲ್ಲಿಡಲಾಗಿದೆ. ಒಬ್ಬರು ಸಭೆಯ ಬಳಿಕ ಬೆಂಗಳೂರಿನಲ್ಲೇ ನೆಲೆಸಿದ್ದು, ಅವರನ್ನು ಜಿಲ್ಲಾಡಳಿತ ಸಂಪರ್ಕಿಸಲಾಗಿದೆ. ಉಳಿದ 9 ಮಂದಿಯ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.
ಇನ್ನು, ರೈತರು ಹಾಗೂ ಗ್ರಾಹಕರು ತರಕಾರಿ ಬೆಲೆಗೆ ಬೇಸ್ತುಬಿದ್ದಿರುವ ಕುರಿತು ಕ್ರಮ ಕೈಗೊಳ್ಳುತ್ತೇನೆ, ಯಳಂದೂರಿನಲ್ಲಿ ನಿರಾಶ್ರಿತರಾಗಿರುವ ಮಹಾರಾಷ್ಟ್ರದ ಕಾರ್ಮಿಕರ ಕುರಿತು ಅಲ್ಲಿನ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಇನ್ನು, ಇದಕ್ಕೂ ಮುನ್ನ ಕೊಳ್ಳೇಗಾಲದ ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ನಾಲ್ ರೋಡ್ ಚೆಕ್ ಪೋಸ್ಟ್, ಯಳಂದೂರು ತಾಲೂಕಿನ ಗೌಡಹಳ್ಳಿಯ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದರು.