ಚಾಮರಾಜನಗರ: ನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀಗಳ 108 ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ ಮಾಡಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಧರ್ಮದಿಂದ ಭಾರತ ದೇಶ ಉಳಿದಿದೆ. ಇಸ್ರೋ ವಿಜ್ಞಾನಿಗಳು ಕೂಡ ಚಂದ್ರಯಾನ-3 ಉಡಾವಣೆಗೂ ಮುನ್ನ ವಿಷ್ಣು ಹಾಗೂ ಶಿವನಿಗೆ ಪೂಜೆ ಸಲ್ಲಿಸಿದ್ರು. ಈ ಮೂಲಕ ತಮ್ಮದು ವೈಚಾರಿಕ ಧರ್ಮ ಎಂದು ತೋರಿಸಿ ಕೊಟ್ಟಿದ್ದಾರೆ ಎಂದರು.
ಇಡೀ ಪ್ರಪಂಚಕ್ಕೆ ಒಳ್ಳೆಯದು ಬಯಸುವ, ಪ್ರಕೃತಿಯನ್ನು ಪೂಜಿಸುವವರು ಭಾರತೀಯರು. ಅಲ್ಲದೆ ವಸುಧೈವ ಕುಟುಂಬಕಂ ಎಂಬ ಸಂದೇಶವನ್ನು ಸಾರಿದ್ದಾರೆ. ವಿದೇಶಿಗರು ಕೂಡ ನಮ್ಮ ವಿಚಾರಕ್ಕೆ ಮಾರುಹೋಗಿದ್ದಾರೆ. ವೈಚಾರಿಕತೆಯನ್ನು ನಮ್ಮ ಧರ್ಮ ಆಧರಿಸಿದೆ. ಖಾವಿ ಬಟ್ಟೆಯಲ್ಲಿ ಶ್ರೇಷ್ಠತೆ ಇದೆ. ವಿದೇಶದಲ್ಲೂ ಸಾಧು, ಸಂತರಿಗೆ ಗೌರವವಿದೆ. ಮಠ-ಮಂದಿರಗಳು ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಹೇಳಿಕೊಡಬೇಕಿದೆ. ಸರ್ಕಾರ ಮಾಡಬಹುದಾದ ಕೆಲಸವನ್ನು ಇಂದು ಮಠಗಳು ಮಾಡುತ್ತಿವೆ. ಬಸವಣ್ಣನವರ ತತ್ವದಲ್ಲಿ ಮಠಗಳು ಶಿಕ್ಷಣ ನೀಡುತ್ತಿವೆ. ಕರ್ನಾಟಕದಲ್ಲಿ ಬಸವಣ್ಣ ಹುಟ್ಟದಿದ್ದರೇ ನಮ್ಮ ಧರ್ಮ, ಸಂಸ್ಕಾರ ಕರ್ನಾಟಕದಲ್ಲಿ ಉಳಿಯುತ್ತಿರಲಿಲ್ಲ ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಬುದ್ಧ, ಬಸವ, ಮಹಾವೀರ ಸನಾತನ ಧರ್ಮದ ವಿರುದ್ಧ ಇದ್ದರು: ಸಂಸದ ವಿ ಶ್ರೀನಿವಾಸಪ್ರಸಾದ್ ಮಾತನಾಡಿ, ಬುದ್ಧ, ಬಸವ, ಮಹಾವೀರ, ಗುರುನಾನಕ್ ಅವರು ಸನಾತನ ಧರ್ಮದ ವಿರುದ್ಧ ಇದ್ದರು. ಇಲ್ಲಿನ ಜಾತೀಯತೆ, ಮೌಢ್ಯತೆ ವಿರುದ್ಧ ಇದ್ದವರು. ಆದರೆ, ಸನಾತನ ಧರ್ಮವನ್ನು ದಮನ ಮಾಡುತ್ತೇವೆ, ಮುಗಿಸುತ್ತೇವೆ ಎಂದು ಹೇಳುವುದು ತಪ್ಪು ಎಂದರು. ಬಸವಣ್ಣನವರು ಸನಾತನ ಧರ್ಮದ ವಿರುದ್ಧ ಮತ್ತೊಂದು ಧರ್ಮ ಕಟ್ಟಿದ್ದರು. ಎಲ್ಲಾ ಜಾತಿಯವರನ್ನು ಒಳಗೊಂಡ ಬಸವ ಧರ್ಮವನ್ನು ಸ್ಥಾಪಿಸಿದರು. ಈ ಮೂಲಕ 12ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿ ಮಾಡಿದರು ಎಂದರು.
ಕೆರೆ ನೀರು ವಿಚಾರದಲ್ಲಿ ಕ್ರೆಡಿಟ್ ಫೈಟ್ : ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಕೆರೆಗೆ ನೀರು ತುಂಬುವ ಯೋಜನೆ ತಂದದ್ದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ. ಗಡಿಜಿಲ್ಲೆಗೆ ಭಗೀರಥನಂತೆ ಬಂದರು. ಜೈಲಿಗೆ ಹೋಗಲೂ ಸಿದ್ಧನಿದ್ದೇನೆ, ಆದರೆ ಕೆರೆ ತುಂಬುವ ಯೋಜನೆಯಿಂದ ಹಿಂದೆ ಸರಿಯಲ್ಲ ಎಂದಿದ್ದರು. ಅವರನ್ನು ಚಾಮರಾಜನಗರ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬಳಿಕ ಮಾತನಾಡಿದ ಸಚಿವ ಕೆ. ವೆಂಕಟೇಶ್, ಕೆರೆಗೆ ನೀರು ತುಂಬುವ ಯೋಜನೆ ಜಾರಿ ಮಾಡಿದವರು ಸಿದ್ದರಾಮಯ್ಯ. ಕೆರೆ ತುಂಬುವ ಯೋಜನೆ ಘೋಷಿಸಿದ್ದು ಯಡಿಯೂರಪ್ಪ. ಇದಕ್ಕೆ ಅನುದಾನ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ. ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕರಂದ್ಲಾಜೆ : ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರಂದ್ಲಾಜೆ, ಶಿವಮೊಗ್ಗದಲ್ಲಿ ನಡೆದ ಕಲ್ಲು ತೂರಾಟ ಸಂಬಂಧ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಭ್ರಷ್ಟಾಚಾರ ಬಯಲಾಗುವ ಭಯದಲ್ಲಿ ಆರ್‌ಟಿಐ ಕಾರ್ಯಕರ್ತರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸುತ್ತಿದೆ: ಅಶ್ವತ್ಥನಾರಾಯಣ ಆರೋಪ