ಬೆಂಗಳೂರು: ವಿಶ್ವ ಸೈಕಲ್ ದಿನದ ಅಂಗವಾಗಿ ಸೈಕಲ್ ಬಳಸಿ, ಇಂಧನ ಉಳಿಸಿ, ಪರಿಸರ ರಕ್ಷಿಸಿ, ಆರೋಗ್ಯ ವೃದ್ಧಿಸಿ ಘೋಷಣೆಯಡಿ ನಿನ್ನೆ ಜಯನಗರದಲ್ಲಿ ಹೀರೋ ಸೈಕಲ್ಸ್ ವತಿಯಿಂದ ಸೈಕಲ್ ರೇಸ್ ನಡೆಯಿತು.
ಜೂನ್ 3 ವಿಶ್ವ ಸೈಕಲ್ ದಿನ. ಇದರ ಅಂಗವಾಗಿ ಸೈಕಲ್‌ನ ಮಹತ್ವ ಸಾರುವ ಉದ್ದೇಶದಿಂದ ಹೀರೋ ಸೈಕಲ್ಸ್ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು. ಜಯನಗರದ 4ನೇ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್‌ವರೆಗೆ ಸೈಕಲ್ ರೇಸ್ ನಡೆಯಿತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳನ್ನು ಹಿಡಿದು, ಟಿ-ಶರ್ಟ್ ತೊಟ್ಟು ಲವಲವಿಕೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಉತ್ಸುಕತೆ ತೋರಿದರು.
ಒಂದು ಸೈಕಲ್ ನಮ್ಮ ಬದುಕಿನ ಚಕ್ರವನ್ನೇ ಬದಲಿಸುತ್ತದೆ. ಸೈಕಲ್ ಭೂಮಿಯಷ್ಟೇ ಅಲ್ಲದೇ ದೇಹಕ್ಕೂ ಹಿತಕಾರಿ. ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ ಎಂದು ರೇಸ್ನಲ್ಲಿ ಪಾಲ್ಗೊಂಡಿದ್ದ ಬೈಸಿಕಲ್ ರೈಡರ್ ಹೇಳಿದರು.
ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಿರೀಕ್ಷೆಗಿಂತ ಹೆಚ್ಚು ಜನ ರೇಸ್ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ನಮ್ಮ ಅಭಿಯಾನವನ್ನು ಯಶಸ್ವಿಗೊಳಿಸಿದರು ಎಂದು ಬೈಸಿಕಲ್ ರೇಸ್ ಆಯೋಜಕರಾದ ಅಭಿಜಿತ್ ತಿಳಿಸಿದರು.