ಬೆಂಗಳೂರು: ನಾಳೆ ವಿಶ್ವಾಸಮತಯಾಚನೆ ಮಾಡಿ ಗೆಲ್ಲುತ್ತೇವೆ. ಬೇರೆ ಪಕ್ಷದ ಶಾಸಕರು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮ ಶಾಸಕರು ಬಹಳ ಉತ್ಸಾಹದಿಂದ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿಲ್ಲ. ಸದನದಲ್ಲಿ ಅತ್ಯಂತ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಅನಗತ್ಯ ವಿಳಂಬ ಎಂದು ಬಿಜೆಪಿ ಅನ್ಯತಾ ಆರೋಪ ಮಾಡುತ್ತಿದೆ. ಸದನದಲ್ಲಿ ನಾವು ಅತ್ಯಂತ ಪ್ರಮುಖ ವಿಚಾರಗಳಾದ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕೈಗೊಳ್ಳುವ ಕ್ರಮ ಹಾಗೂ ಸುಪ್ರೀಂ ತೀರ್ಪಿನ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೇವೆ. ಇದನ್ನು ತಪ್ಪು ಎನ್ನುವುದು ಸರಿಯಲ್ಲ. ಸದನ ಸರಿಯಾದ ಮಾರ್ಗದಲ್ಲಿಯೇ ಸಾಗಿದೆ. ರಾಜ್ಯಪಾಲರು ಕೈಗೊಂಡ ನಿಲುವನ್ನ ಪ್ರಶ್ನಿಸುವುದು ತಪ್ಪು ಎಂದು ಹೇಳಿದರು.
ನಾಳೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಂಬಿಕೆ ಇದೆ. ಇದನ್ನು ನಾವು ನಿರೀಕ್ಷೆಯಿಂದ ನೋಡುತ್ತಿದ್ದೇವೆ. ಈ ಹಿಂದಿನ ತೀರ್ಪು ಏನು ಇದೆ ಅದನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು. 10 ಶೆಡ್ಯುಲ್ನಲ್ಲಿ ಏನ್ ಇದೆ ಅದು ಚರ್ಚೆ ಆಗಬೇಕು. ಪಾಯಿಂಟ್ ಆಫ್ ಆರ್ಡರ್ನಲ್ಲಿ ವಿಶ್ವಾಸಮತಯಾಚನೆ ಮುಂದಕ್ಕೆ ಹಾಕಬೇಕು ಎಂದು ಹೇಳಿದ್ದಾರೆ. ಏನಾಗುವುದೋ ಎಂದು ನೋಡೋಣ ಎಂದರು.
ಬಿಎಸ್ಪಿಯ ಮಾಯಾವತಿ ಸ್ಪಷ್ಟವಾದ ಆದೇಶ ಹೊರಡಿಸಿದ್ದಾರೆ. ಅವರ ಶಾಸಕರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಇವರು ಮೊದಲು ಕೂಡ ನಮ್ಮೊಂದಿಗೆ ಇದ್ದರೂ ಮುಂದೆಯೂ ಇರಲಿದ್ದಾರೆ. ಮಧ್ಯ ಒಂದಿಷ್ಟು ಗೊಂದಲ ನಿರ್ಮಾಣವಾಗಿತ್ತು. ಅದು ಸರಿ ಹೋಗಲಿದೆ ಎಂಬ ವಿಶ್ವಾಸ ಇತ್ತು ಎಂದರು.
ನಾವು ವಿಧಾನಸಭೆಯಲ್ಲಿ ಕಾಲ ಹರಣ ಮಾಡಲಿಲ್ಲ. ನಾವು ಉತ್ತಮವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಇವತ್ತೇ ಸಂಜೆ ಮಾಡಿ ಎಂದು ಹೇಳಬಾರದಿತ್ತು. ವಿಶ್ವಾಸಮತಯಾಚನೆಯಲ್ಲಿ ನಮ್ಮ ಶಾಸಕರು ಏನು ಮಾಡಿದ್ರು ಅಂತ ಹೇಳ ಬಾರದ?. ನಾಳೆ ಸರ್ವೋಚ್ಚ ನ್ಯಾಯಾಲಯ ಏನು ಹೇಳುತ್ತೆ ನೋಡೋಣ, ಸಾಂವಿಧಾನಿಕ ಇಲಾಖೆಗಳು ಏನು ಮಾಡುತ್ತವೆ ಎಂದು ನೋಡೋಣ ಎಂದರು.
ಅತೃಪ್ತರು ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಬಿಜೆಪಿ ಅವರಿಗೆ ಹಣ ಹಾಗೂ ಇತರೆ ಆಮಿಶ ಒಡ್ಡಿದೆ. ಅವರು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ. ಇವರು ದುಡ್ಡಿಗಾಗಿ ಹೀಗೆ ಮಾಡಿದ್ದಾರೆ. ಇದನ್ನು ನಾವು ರಾಜಕೀಯ ವ್ಯಭಿಚಾರ ಎನ್ನಬೇಕು. ನಾವು ಇದನ್ನು ಸಮರ್ಥವಾಗಿ ಎದರಿಸುತ್ತೇವೆ ನಮಗೆ ನಂಬಿಕೆ ಇದೆ ಎಂದು ವಿವರಿಸಿದರು.