ಬೆಂಗಳೂರು: ನನ್ನ ಹೆಸರಲ್ಲಿ ಗೌಡ ಇದ್ದ ಕಾರಣ ನಾನು ಸಿಎಂ, ಕೇಂದ್ರ ಮಂತ್ರಿಯಾದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೊಳಕಾಗುತ್ತಿದ್ದ ಹಾಗೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ ಅವರು, ಬಿಜೆಪಿ ಪಕ್ಷ , ನನ್ನ ಹೆತ್ತ ತಾಯಿ ಸಮಾನ. ಕುಗ್ರಾಮ ಮಂಡೆಕೋಲಿನಿಂದ ಬಂದ ಈ ಹುಡುಗನಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ನನ್ನ ಪಕ್ಷ ಒಕ್ಕಲಿಗ ಸಮಾಜಕ್ಕೆ ಉತ್ತಮ ಸ್ಥಾನಮಾನ, ಪ್ರಾತಿನಿಧಿತ್ವವನ್ನು ನನ್ನ ಮೂಲಕ ಕೊಟ್ಟಿದೆ ಅನ್ನುವ ಮಾತನ್ನು ನಾನು ಹೆಮ್ಮೆಯಿಂದ ಕೇಳಿಕೊಂಡದ್ದನ್ನು ಬೇರೆ ರೀತಿಯಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನಿಂದು ನಿರಂತರ ಚುನಾವಣೆಗಳನ್ನು ಗೆಲ್ಲಲು, ಜಾತ್ಯತೀತವಾಗಿ, ಪಕ್ಷಾತೀತವಾಗಿ ನನ್ನನ್ನು ಜನರು ಆಯ್ಕೆ ಮಾಡಲು ನನ್ನ ಪಕ್ಷ ಮತ್ತು ಮೋದಿಯವರ ನಾಯಕತ್ವವೇ ಕಾರಣ. ಮುಂದೆ ಜನ ನಮ್ಮನ್ನು ಗುರುತಿಸುವುದು, ಗೌರವಿಸುವುದು ಮೋದಿಯವರ ನೇತೃತ್ವದಲ್ಲಿ ನಾವು ಮಾಡುವ ಕೆಲಸದಿಂದ ಎಂದಿದ್ದಾರೆ.
ಶನಿವಾರ ನಗರದಲ್ಲಿ ನಡೆದ ವಿಚಾರ ಸಂಕೀರ್ಣವೊಂದರಲ್ಲಿ ಡಿವಿಎಸ್ ಮಾತನಾಡುತ್ತಾ , ನನ್ನ ಹೆಸರಲ್ಲಿ ಗೌಡ ಇದ್ದ ಕಾರಣ ನಾನು ಸಿಎಂ ಆದೆ. ಕೇಂದ್ರ ಮಂತ್ರಿಯಾದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ಹೇಳಿಕೆ ವಿವಾದಾತ್ಮಕ ರೂಪ ಪಡೆಯುತ್ತಿರುವುದನ್ನು ಮನಗಂಡ ಸದಾನಂದ ಗೌಡರು ಟ್ವಿಟರ್ ಮೂಲಕ ಸಮಜಾಯಿಷಿ ನೀಡಿದ್ದಾರೆ.