ಬೆಂಗಳೂರು : ಊರಿನಲ್ಲಿ ಒಂದೇ ಸ್ಮಶಾನವಿದ್ದು, ಮೊದಲು ಒಂದು ಎಕರೆ ಇದ್ದ ಭೂಮಿ ಭೂಗಳ್ಳರ ಒತ್ತುವರಿಯಿಂದ 10 ಗುಂಟೆಯೂ ಇಲ್ಲದಂತಾಗಿದ್ದು, ಸತ್ತ ವ್ಯಕ್ತಿಯನ್ನು ಹೂಳಲು ಮೊದಲಿದ್ದ ಘೋರಿಯನ್ನೇ ಅಗೆದು ಅದರ ಮೇಲೆ ಶವ ಹೂಳ ಬೇಕಾದ ದುಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರದಲ್ಲಿ ಕಂಡು ಬಂದಿದೆ.
ಸರ್ಕಾರಿ ಜಮೀನಿನಲ್ಲಿ ಸತ್ತವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆದ್ರೆ ದಿನಕಳೆದಂತೆ ಭೂಮಿಗೆ ಬಂಗಾರದ ಬೆಲೆ ಬಂದಾಗಿನಿಂದ ಕೆರೆ, ಕುಂಟೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲಿ, ಸ್ಮಶಾನ ಜಾಗವನ್ನು ಬಿಡದ ಭೂಗಳ್ಳರು ಸುಮಾರು ಮುಕ್ಕಾಲು ಎಕರೆಯಷ್ಟು ಸ್ಮಶಾನ ಜಾಗವನ್ನು ಕಬಳಿಸಿದ್ದಾರೆ. ಅಲ್ಲದೇ ಪಕ್ಕದಲ್ಲೇ ಇರುವ 1 ಎಕರೆ 6 ಗುಂಟೆಯನ್ನು ಕೂಡ ಕಬಳಿಸಿದ್ದಾರೆ.
ಇನ್ನು ಒತ್ತುವರಿಯಾಗಿರುವುದನ್ನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸರ್ಕಾರದ 2.6 ಎಕರೆ ಜಮೀನಿನಲ್ಲಿ ಒಂದು ಎಕರೆ ಕೂಡ ಇಲ್ಲದಂತಾಗಿದೆ. ಯಾರಾದರೂ ಸಾವನಪ್ಪಿದರೆ ಬೇರೆಯವರ ಗೋರಿ ಒಡೆದು ಹೂಳುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮಧ್ಯದಲ್ಲಿ ಹೂಳ ಬೇಕಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.