ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್ ಹಗರಣದ ಕುರಿತು ಸಿಬಿಐ ತನಿಖೆಯಾಗಬೇಕು. ಜೊತೆಗೆ ಕ್ಯಾಪಿಟಲ್, ಅಲಾ, ಅಜ್ಮೇರಾ, ಆ್ಯಬಿಡೆಂಟ್ನಂತಹ ಸಂಸ್ಥೆಗಳಿದ್ದಾವೆ. ಅವುಗಳ ತನಿಖೆಯೂ ಆಗಲಿ ಎಂದು ಮಾಜಿ ಸಚಿವ ರೋಷನ್ ಬೇಗ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೂಡ ಇದೆ ರೀತಿ ಆಗಿದೆ. ಆದಷ್ಟು ಬೇಗ ಹಣ ಕಳೆದುಕೊಂಡವರಿಗೆ ವಾಪಸ್ ಕೊಡಿಸಬೇಕು. ಈ ಕುರಿತು ತನಿಖೆಯನ್ನು ಸಿಬಿಐಗೆ ನೀಡಿದರೆ ರೆಡ್ ಅಲರ್ಟ್ ಜಾರಿಗೊಳಿಸುತ್ತಾರೆ. ಮನ್ಸೂರ್ ಖಾನ್ 1000 ಕೋಟಿ ತನ್ನ ಸ್ವಂತ ಅಕೌಂಟ್ಗೆ ಹಾಕಿಕೊಂಡಿದ್ದಾರೆ. ತಕ್ಷಣ ಅವನ ಅಕೌಂಟ್ ಸೀಜ್ ಮಾಡಬೇಕು ಎಂದರು.
ನಾನು ಪಕ್ಕಾ ರಾಜಕಾರಣಿಯಲ್ಲ, ಹೋರಾಟಗಾರ. ಬೆಂಗಳೂರಿನಲ್ಲಿ ಒಂದೇ ಮೆಡಿಕಲ್ ಕಾಲೇಜು ಇತ್ತು. ಬೋರಿಂಗ್ನಲ್ಲಿ ಮೆಡಿಕಲ್ ಕಾಲೇಜ್ ಆರಂಭವಾಗಲಿದೆ. ನಾನಾಗಲಿ ನಮ್ಮ ಫ್ಯಾಮಿಲಿಯಾಗಲೀ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಪಾಲುದರರೂ ಅಲ್ಲ ಎಂದರು.
ಇನ್ನು ನಾನು ಪಕ್ಷದ ನಾಯಕರ ವಿರುದ್ಧ ಮಾತನಾಡಿದ ತಕ್ಷಣ ಈ ರೀತಿಯ ಬೆಳವಣಿಗೆ ಆಗಿರುವುದು ನನಗೆ ಆಶ್ಚರ್ಯವಾಗಿದೆ. ಜಮೀರ್ ನನಗೆ ಕಿರಿಯ ಸಹೋದರ. ಅವರ ಮೇಲೆ ನನಗೆ ಅಪನಂಬಿಕೆ ಇಲ್ಲ. ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಲಿ ಎಂದರು.
ಐಎಂಎ ಆಡಿಯೋ ಬಿಡುಗಡೆ ಬಗ್ಗೆ ನನಗೆ ಮಾಹಿತಿ ಬಂತು. ಯಾರೋ ಸ್ನೇಹಿತರು ಮಾಹಿತಿ ಕೊಟ್ಟರು. ಇದನ್ನ ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತೇನೆ. ಐಎಂಎ ಅಷ್ಟೇ ಅಲ್ಲ, ಆ್ಯಂಬಿಡೆಂಟ್ ಸೇರಿದಂತೆ ಹಲವು ಕಂಪನಿಗಳು ಇವೆ. ಎಲ್ಲವನ್ನೂ ಸಿಬಿಐಗೆ ಕೊಡಲಿ ಎಂದರು.