ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ಬೆಚ್ಚಿದ ಕನ್ನಡಿಗರು ತಂಡೋಪತಂಡವಾಗಿ ತಾಯಿನಾಡಿನತ್ತ ಮುಖ ಮಾಡಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಹೆಚ್ಎಸ್ಆರ್ ಬಡಾವಣೆ ನಿವಾಸಿ ಮಯೂರ್ ಮತ್ತು ಅಮೂಲ್ಯ ದಂಪತಿ, ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಆಗಮಿಸಿದರು. ಕಳೆದ ರಾತ್ರಿ ಏರ್ ಇಂಡಿಯಾ ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಂಪತಿ, ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಆಘಾತಕಾರಿ ಸಂಗತಿಗಳನ್ನ ಹಂಚಿಕೊಂಡರು. 'ಬಾಂಬ್ ಸ್ಫೋಟವಾದ ಶಾಂಗ್ರೀಲಾ ಹೋಟೆಲ್ ಪಕ್ಕದ ಮತ್ತೊಂದು ಹೋಟೆಲ್ನಲ್ಲಿ ತಂಗಿದ್ದೆವು. ಅದೃಷ್ಟವಶಾತ್ ಘಟನೆ ನಡೆದ ದಿನ ಬೇರೆ ಕಡೆ ತೆರಳಿದ್ದರಿಂದ ಸಂಭವನೀಯ ದುರಂತದಿಂದ ಪಾರಾಗಿದ್ದೇವೆ' ಎಂದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದರು.
'ನಮಗೆ ಎಂದೂ ಈ ರೀತಿಯ ಅನುಭವ ಆಗಿಲ್ಲ. ಬಾಂಬ್ ಸ್ಫೋಟದ ಬಳಿಕ ನಾವೆಲ್ಲಾ ಸಾಕಷ್ಟು ಭಯಪಟ್ಟಿದ್ದೆವು. ದೇವರ ದಯೆ ನಾವೆಲ್ಲಾ ಮತ್ತೆ ನಮ್ಮ ನಾಡಿಗೆ ಬಂದಿದ್ದೇವೆ' ಎಂದು ಬೆಂಗಳೂರು ನಿವಾಸಿ ನಿತೇಶ್ ನಾಯಕ್ ಸೇರಿದಂತೆ ಹಲವರು ವಿಧ್ವಂಸಕ ದಾಳಿ ಕುರಿತು ಆತಂಕ ವ್ಯಕ್ತಪಡಿಸಿದರು.