ಬೆಂಗಳೂರು / ಚಿಕ್ಕಬಳ್ಳಾಪುರ: ವಿಧಾನಸೌಧದಲ್ಲಿ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಗುತ್ತಿಗೆ ಆಧಾರದ ನೌಕರ ರೇವಣ್ಣ ಕುಮಾರ್ (ರವಿ) ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೇವಣ್ಣ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ಲೈಬ್ರರಿ ನಿರ್ವಾಹಕನಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 20 ದಿನಗಳಿಂದ ವಿಧಾನಸೌಧದಲ್ಲಿ ಟ್ರೈನಿಂಗ್ ಇದ್ದ ಕಾರಣ ಬೆಂಗಳೂರಿಗೆ ತೆರಳಿದ್ದಾನೆ. ಅಲ್ಲೇ ಉಳಿದುಕೊಂಡಿದ್ದ ಆತ ಕಳೆದ ನಾಲ್ಕು ದಿನಗಳ ಹಿಂದೆ ಮನೆಗೆ ಕರೆ ಮಾಡಿ ಚಾರ್ಜ್ ಇಲ್ಲದ ಕಾರಣ ಮೊಬೈಲ್ ಸ್ವಿಚ್ ಆಫ್ ಆಗಲಿದೆ, ಕಾಲ್ ಮಾಡಬೇಡಿ ಎಂದು ಹೇಳಿ, ಇಂದು ಮನೆಗೆ ಬರುವುದಾಗಿ ತಿಳಿಸಿದ್ದನಂತೆ. ಆದರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ತಾಯಿ ಆದಿಲಕ್ಷ್ಮಮ್ಮ ಗಾಬರಿಗೊಂಡಿದ್ದಾರೆ.
ಆದಿಲಕ್ಷಮ್ಮಗೆ ನಾಲ್ಕು ಜನ ಮಕ್ಕಳಿದ್ದು, ಮೊದಲನೆಯವರೇ ರೇವಣ್ಣ ಕುಮಾರ್. ರೇವಣ್ಣನ ತಂದೆ ಸುಮಾರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ರೇವಣ್ಣಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕಳೆದ 20 ವರ್ಷಗಳಿಂದ ಲ್ರೈಬ್ರರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಬಾರಿ ಪ್ರಯತ್ನಿಸಿದರೂ ಇನ್ನೂ ಕೆಲಸ ಪರ್ಮನೆಂಟ್ ಆಗಿಲ್ಲ ಎಂದು ತಾಯಿ ಮತ್ತು ತಮ್ಮಂದಿರ ಬಳಿ ರೇವಣ್ಣ ಹೇಳಿಕೊಂಡಿದ್ದನಂತೆ. ಹೀಗಾಗಿ ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಮನೆಯವರು ಅಭಿಪ್ರಾಯ ಪಟ್ಟಿದ್ದಾರೆ.
ಏನೇಳುತ್ತೆ ಪ್ರಾಥಮಿಕ ತನಿಖೆ?
ಆದರೆ ಪ್ರಾಥಮಿಕ ತನಿಖೆಯಲ್ಲಿ ಮಾತ್ರ ರೇವಣ್ಣ ಕುಮಾರ್ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ರೇವಣ್ಣ ಲೈಬ್ರೆರಿಯ ಹಂಗಾಮಿ ನೌಕರನಾಗಿದ್ದು, ಹುದ್ದೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿಯಿಂದ ರಾಷ್ಟ್ರಪತಿ ವರೆಗೂ ಸಂಪರ್ಕ ಮಾಡಿದ್ದನು, ಆದ್ರೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ಬಳಿ ನ್ಯಾಯ ಒದಗಿಸಿ ಎಂದು ಅಲೆದಾಡುತ್ತಿದ್ದನು. ಇವತ್ತು ಮತ್ತೆ ವಿಧಾನಸೌಧಕ್ಕೆ ಭೇಟಿಯಾದ ರೇವಣ್ಣ, 6000 ಸಾವಿರ ಲೈಬ್ರರಿ ನೌಕರರ ಪ್ರತೀಕವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವು ಆತ್ಮಹತ್ಯೆ ಅಲ್ಲ, ಸರ್ಕಾರಕ್ಕೆ ನೀಡುತ್ತಿರುವ ಬಲಿದಾನ ಎಂದು ಪತ್ರದಲ್ಲಿ ನಮೂನೆ ಮಾಡಿ ಈ ರೀತಿ ಮಾಡಿಕೊಂಡಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಇನ್ನು ಈ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್‌ಮಾಹಿತಿ ನೀಡಿದ್ದು, ಮಧ್ಯಾಹ್ನ 1.30 ರ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಲ್ಲಿ ಯಾವುದೇ ಹರಿತ ಆಯುಧ ಸಿಕ್ಕಿಲ್ಲ. ಸ್ಥಳದಲ್ಲಿ ಆಧಾರ್ ಕಾರ್ಡ್, ಗುರುತಿನ ಚೀಟಿ, ಉದ್ಯೋಗ ನೇಮಕಾತಿ ಪತ್ರ ಕೂಡಾ ಸಿಕ್ಕಿದ್ದು, ತನಿಖೆ ಮುಂದುವರೆದಿದೆ ಎಂದರು.