ಬೆಂಗಳೂರು: ರಾಜ್ಯದ ಮೋಸ್ಟ್ ವಾಂಟೆಂಟ್ ಅಂಡರ್ ವಲ್ಡ್ ಡಾನ್ ಎಂದೇ ಕುಖ್ಯಾತಿ ಪಡೆದುಕೊಂಡಿರುವ ರವಿ ಪೂಜಾರಿ, ಸೆನೆಗಲ್ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದಾನೆ ಎಂದು ಅಲ್ಲಿನ ಮಾಧ್ಯಮಾಗಳು ವರದಿ ಮಾಡಿವೆ.
ಪೊಲೀಸ್ ಮೂಲಗಳನ್ನಾಧರಿಸಿ, ಸೆನೆಗಲ್ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಕಲಿ ಪಾಸ್ಪೋರ್ಟ್ ಆರೋಪದಡಿ ಐದು ತಿಂಗಳ ಹಿಂದೆ ಸೆನೆಗಲ್ ಪೊಲೀಸರಿಂದ ರವಿಪೂಜಾರಿ ಬಂಧನಕ್ಕೆ ಒಳಗಾಗಿದ್ದ. ಈ ಸಂಬಂಧ ಕಳೆದ ವಾರವಷ್ಟೇ ಸೆನೆಗಲ್ ನ್ಯಾಯಾಲಯ ಪೂಜಾರಿಗೆ ಪ್ರಕರಣ ಇತ್ಯರ್ಥವಾಗುವವರೆಗೂ ದೇಶ ಬಿಟ್ಟು ತೆರಳದಂತೆ ತಾಕೀತು ಮಾಡಿ, ಜಾಮೀನು ಅರ್ಜಿ ಪುರಸ್ಕರಿಸಿತ್ತು. ಜಾಮೀನು ಸಿಕ್ಕ ತಕ್ಷಣ ರವಿ ಪೂಜಾರಿ ರಸ್ತೆ ಮಾರ್ಗದಿಂದ ಪಲಾಯನವಾಗಿದ್ದು, ಸೆನೆಗಲ್ ನೆರೆಯ ರಾಷ್ಟ್ರಗಳಾದ ಮಾಲಿ, ಐವರಿ ಕೋಸ್ಟ್ ಅಥವಾ ಬುರ್ಕಿನಾ ಫಾಸೋಗೆ ರವಿ ಪೂಜಾರಿ ತೆರಳಿರುವ ಬಗ್ಗೆ ವರದಿಯಾಗಿದೆ.
ರವಿ ಪೂಜಾರಿ ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋ ದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಆ್ಯಂಟನಿ ಫರ್ನಾಂಡೀಸ್ ಹೆಸರಿನಲ್ಲಿ ಹೋಟೆಲ್ ಉದ್ಯಮ ನೆಡೆಸುತ್ತಿದ್ದ. ಪೂಜಾರಿ ಕಳೆದ ಜನವರಿ 21 ರಂದು ಡಕಾರ್ ಬಳಿ ಬಾರ್ಬರ್ ಶಾಪ್ನಲ್ಲಿದ್ದಾಗ ಬಂಧನವಾಗಿದ್ದ. ಈತ ಬಂಧನವಾಗುತ್ತಿದ್ದಂತೆ ಭಾರತ ಅಲರ್ಟ್ ಆಗಿತ್ತು. ಭಾರತದಲ್ಲಿ ಸುಲಿಗೆ, ಕೊಲೆ, ಕೊಲೆಯತ್ನ ಸೇರಿದಂತೆ ಈತನ ವಿರುದ್ಧ ಸುಮಾರು 200ಕ್ಕೂ ಅಧಿಕ ಪ್ರಕರಣಗಳಿವೆ. ಅದರಲ್ಲೂ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚು ಕೇಸ್ ದಾಖಲಾಗಿವೆ. ಕಳೆದ 20 ವರ್ಷಗಳಿಂದ ಭಾರತದಿಂದ ರವಿ ಪೂಜಾರಿ ತಪ್ಪಿಸಿಕೊಂಡಿದ್ದಾನೆ.