ಬೆಂಗಳೂರು: ಕಳೆದ ಎರಡು ದಿನಗಳಿಂದ ಐಎಂಎ ಜ್ಯುವೆಲರ್ಸ್ ವಂಚನೆ ಸುದ್ದಿ ಬರ್ತಾ ಇದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೂ 1500ಕ್ಕೂ ಹೆಚ್ಚು ಮಂದಿಗೆ ವಂಚನೆಯಾಗಿದೆ. ಇದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸಲಹೆ ನೀಡಿದ್ದಾರೆ.
ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಕರಣವನ್ನು ಸಿಬಿಐಗೆ ವಹಿಸುವುದರಿಂದ ಪಾರದರ್ಶಕ ಹಾಗೂ ವಿಸ್ತೃತವಾದ ತನಿಖೆ ಆಗಲಿದೆ. ಇದರಿಂದ ಸಿಐಟಿ, ಎಸ್‍ಐಟಿ ಅಥವಾ ಸಿಸಿಬಿ ತನಿಖೆ ಬದಲು ಸಿಬಿಐಗೆ ವಹಿಸುವುದು ಸೂಕ್ತ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು. ಜನರಿಗೆ ದುಡ್ಡು ಕೊಡಿಸಬೇಕು. ಈ ನಿಟ್ಟಿನಲ್ಲಿ ಅವಕಾಶ ಸಿಕ್ಕರೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ಚಿತ್ರದುರ್ಗಕ್ಕೆ ತೆರಳಿ, ಅಲ್ಲಿ ನಷ್ಟಕ್ಕೊಳಗಾದ ಮುಸಲ್ಮಾನ ಸಮುದಾದ ಸಾವಿರಾರು ನಾಗರಿಕರನ್ನು ಭೇಟಿ ಮಾಡುತ್ತೇನೆ. ಅವರಿಂದ ಸಿಗುವ ಮಾಹಿತಿಯನ್ನಾಧರಿಸಿ ಜನರಿಗೆ ಆದ ನಷ್ಟ ಇತ್ಯಾದಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. ಸಿಎಂ ಖುದ್ದು ಭೇಟಿಯಾಗಿ ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದರು.
ನಮ್ಮ ಜಿಲ್ಲೆಯವರಿಗೆ ನಷ್ಟ...
ಕೆಲ ರಾಜಕಾರಣಿಗಳು ಐಎಂಎ ಮಾಲಿಕನ ಜತೆ ಇರೋ ಫೋಟೋ ಕೂಡ ಬರುತ್ತಿದೆ. ರಾಜಕಾರಣಿಗಳು ಕೂಡ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಹೋಗಬೇಕಾಗುತ್ತೆ. ನನ್ನ ದಾವಣಗೆರೆ ಜಿಲ್ಲೆಯವರು ಕೂಡ ಹಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಇದೆ. ಒಂದೇ ದಿನದಲ್ಲಿ ನೂರಾರು ಕೋಟಿ ಮೋಸ ಮಾಡಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೂ ಕೂಡ ಜವಾಬ್ದಾರಿ ಇದೆ. ಪಕ್ಷಾತೀತವಾಗಿ ಈ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಸಿಎಂ ಇದನ್ನ ಖಾಸಗಿಯಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದರು.
ಕೆಲವರು ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ನಾನು ಇದನ್ನ ತನಿಖಾಧಿಕಾರಿಗೆ ಮಾಹಿತಿ ನೀಡುತ್ತೇನೆ. ಇದು ಸಿಐಡಿಗೆ ನೀಡೋ ವಿಷಯ ಅಲ್ಲ. ಹಿಂದೆ ಕೂಡ ಇದೇ ರೀತಿ ಪ್ರಕರಣ ಬಂದಿತ್ತು. ಅದರೆ ಏನೂ ಆಗಿಲ್ಲ. ಪೊಲೀಸರಿಗೆ ಗೊತ್ತಿಲ್ಲದೇ ಆಗುತ್ತಾ? ಗುಪ್ತಾಚರ ಇಲಾಖೆಗೆ ಗೊತ್ತಿಲ್ಲದೇ ಆಗುತ್ತಾ? ಗೃಹ ಸಚಿವರು ಸ್ಥಳಿಯ ಪೊಲೀಸ್ ಅಧಿಕಾರಿಯನ್ನ ಅಮಾನತು ಮಾಡಬೇಕು. ಹೀಗಾಗಿ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದರು.