ಬೆಂಗಳೂರು: ಬಿಎಂಟಿಸಿ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿರ್ದೇಶನದಂತೆ ಅತಿ ಹೆಚ್ಚಿನ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಪಾಸ್ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಆದರಂತೆ 2019-20 ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಸಂಸ್ಥೆಯ ವೆಬ್ ಸೈಟ್ನಲ್ಲಿ ಜೂನ್ 13 ರಿಂದಲೇ ಆನ್‌ಲೈನ್ ಅರ್ಜಿಯನ್ನು ಲಭ್ಯವಿರಿಸಲಾಗಿದೆ.
ಜೂನ್ 17 ರಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ಗಳನ್ನು ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಪಾಸುಗಳನ್ನು ಸಂಸ್ಥೆಯ 15 ಬಸ್ ನಿಲ್ದಾಣಗಳಲ್ಲಿ 50 ಕೌಂಟರ್‌ಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಕೌಂಟರ್‌ಗಳ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಇಲ್ಲಿಯವರೆಗೂ ಆನ್‌ಲೈನ್ ಮೂಲಕ 76,700 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಹಾಗೆ 21,600 ಪಾಸುಗಳನ್ನು ವಿತರಣೆ ಮಾಡಲಾಗಿದೆ.
ವಿದ್ಯಾರ್ಥಿಗಳು ಪಾಸ್ಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಸ್ಥೆಯ ಶಾಲಾ/ಕಾಲೇಜಿನಿಂದ ಅನುಮೋದನೆ ದೊರೆತ ನಂತರ ವಿದ್ಯಾರ್ಥಿಗಳಿಗೆ ಅನುಕೂಲವಾದ ಪಾಸ್ ಪಡೆಯುವ ಕೇಂದ್ರ, ದಿನಾಂಕ, ನಿಗದಿ ಪಡಿಸಿದ ಸಮಯಕ್ಕೆ ಪಾಸ್ ವಿತರಣಾ ಕೇಂದ್ರಕ್ಕೆ ಬಂದು ಪಾಸ್ ಅನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸುವ ವಿವರದ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಇನ್ನು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶದ ಆವಶ್ಯಕತೆಯಿರುವುದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು 2018-19ನೇ ಸಾಲಿನ ಸಾಟ್ಮ್ ಕಾರ್ಡ್ ವಿದ್ಯಾರ್ಥಿ ಪಾಸ್ ಹಾಗೂ ಪ್ರಸ್ತುತ ಸಾಲಿನಲ್ಲಿ ಶಾಲಾ ಕಾಲೇಜಿಗೆ ದಾಖಲಾಗಿರುವ ಶುಲ್ಕ ರಶೀದಿಯೊಂದಿಗೆ ದಿನಾಂಕ ಜುಲೈ 08ರವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ವಿದ್ಯಾರ್ಥಿಗಳು ವಾಸ ಸ್ಥಳದಿಂದ ಶಾಲಾ/ಕಾಲೇಜಿನವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.